ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯನ್ನು ಭೇಟಿಯಾದ ಬಿಜೆಪಿ ನಾಯಕ ಪ್ರತಾಪ್ ಸಿಂಹ; ಸಾಮಾಜಿಕ ಜಾಲತಾಣಗಳಲ್ಲಿ ತರಾಟೆ

Update: 2024-08-13 07:16 GMT

Photo:X/@mepratap

ಮೈಸೂರು: ಇತ್ತೀಚೆಗೆ ಜಾಮೀನಿನಲ್ಲಿ ಹೊರಬಂದಿರುವ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಿಜೆಪಿ ನಾಯಕ, ಮಾಜಿ ಸಂಸದ ಪ್ರತಾಪ್ ಸಿಂಹ ಭೇಟಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ನವೀನ್ ಕುಮಾರ್, ಅಮಿತ್, ಎಚ್ಎಲ್ ಸುರೇಶ್ ಅವರಿಗೆ ಹೈಕೋರ್ಟ್ ಏಕಸದಸ್ಯ ಪೀಠವು ಜುಲೈ 16ರಂದು ಜಾಮೀನು ನೀಡಿತ್ತು. ಇದೀಗ ಕೊಲೆ ಆರೋಪಿ ನವೀನ್ ಕುಮಾರ್ ನನ್ನು ಭೇಟಿಯಾಗಿರುವ ಪ್ರತಾಪ್ ಸಿಂಹ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

“ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಮೊದಲಿಗೆ ಆರೋಪಿ ನಂ-1 ಆಗಿ, ನಂತರ A-17 ಆಗಿ, ಆರೂವರೆ ವರ್ಷ ಜೈಲಿನಲ್ಲಿದ್ದು ಇತ್ತೀಚೆಗೆ ಜಾಮೀನಿನ ಹೊರಬಂದಿರುವ ಸ್ನೇಹಿತ ಮದ್ದೂರು ನವೀನ್ ರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದೆ” ಎಂದು ಪ್ರತಾಪ್ ಸಿಂಹ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಪೋಸ್ಟ್‌ ಬೆನ್ನಲ್ಲೇ ಪ್ರತಾಪ್ ಸಿಂಹ ವಿರುದ್ಧ ಟೀಕೆ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು, "ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಮದ್ದೂರಿನ ನವೀನ್ ಕುಮಾರ್ ತನ್ನ ಗೆಳೆಯ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿಕೊಂಡಿದ್ದಾರೆ. ಇದು‌ ಗೋಡ್ಸೆ ಆರಾಧಕರಾದ ಬಿಜೆಪಿಯವರ ಅಸಲಿ ಮುಖ. ಸಮಾಜದ ಶಾಂತಿ ಕದಡುವ, ಕೊಲೆ, ಸುಲಿಗೆಯಂತಹ ವಿದ್ವಂಸಕ ಕೃತ್ಯ ನಡೆಸುವವರೆಲ್ಲಾ ಬಿಜೆಪಿಯ ಗರ್ಭಗುಡಿಯಲ್ಲೇ ಇರುತ್ತಾರೆ‌ ಎಂಬುವುದಕ್ಕೆ ಇದೊಂದು ನಿದರ್ಶನ" ಎಂದು ಟೀಕಿಸಿದ್ದಾರೆ.

"ದಿಟ್ಟ ಪತ್ರಕರ್ತೆಯಾಗಿದ್ದ ಗೌರಿ ಲಂಕೇಶ್‌ರವರನ್ನು ನಿಷ್ಕಾರಣವಾಗಿ ಕೊಲೆಗೈದ ಆರೋಪಿಯ ಕೃತ್ಯವನ್ನು ಬಿಜೆಪಿಯ ಮಾಜಿ ಸಂಸದರು ಖಂಡಿಸುವ ಬದಲು, ಆ ಆರೋಪಿಯ ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಂಡರೆ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ?" ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ “ಸಮಾಜದಲ್ಲಿ ಅಶಾಂತಿ ಹುಟ್ಟಿಸುವವರು. ಸಮಾಜದ ಸಾಮರಸ್ಯವನ್ನು ಹಾಳು ಮಾಡುವವರು. ತತ್ವ ವಿಚಾರಗಳನ್ನು ಮುಚ್ಚು ಹಾಕಲು ಪ್ರಯತ್ನಿಸುತ್ತಿರುವಂತವರನ್ನು ತಾವು ಹೋಗಿ ಭೇಟಿಯಾಗೋದು ಎಷ್ಟರ ಮಟ್ಟಿಗೆ ನ್ಯಾಯ ಮತ್ತು ನಿಮ್ಮ ಮನಸಾಕ್ಷಿ ಒಪ್ಪುತ್ತಾ” ಎಂದು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News