ಸಂವಿಧಾನ ಬದಲಾಯಿಸುವ ಹೇಳಿಕೆಯಿಂದಾಗಿ ಅನಂತಕುಮಾರ್ ಹೆಗಡೆಗೆ ಬಿಜೆಪಿ ಟಿಕೆಟ್‌ ತಪ್ಪುವ ಸಾಧ್ಯತೆ: ವರದಿ

Update: 2024-03-11 10:29 GMT

ಅನಂತಕುಮಾರ್ ಹೆಗಡೆ

ಹೊಸದಿಲ್ಲಿ: 'ಸಂವಿಧಾನವನ್ನು ಬದಲಾಯಿಸಲು' ಪಕ್ಷಕ್ಕೆ 400 ಸೀಟುಗಳು ಬೇಕು ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರ ಇತ್ತೀಚಿನ ಹೇಳಿಕೆಯಿಂದಾಗಿ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಅವರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಇದೆ ಎಂದು NDTV ವರದಿ ಮಾಡಿದೆ.

ಉತ್ತರ ಕನ್ನಡ ಸಂಸದರ ಹೇಳಿಕೆಗಳಿಂದ ಬಿಜೆಪಿ ಅಂತರ ಕಾಯ್ದುಕೊಂಡಿದ್ದು, ಅದು ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಪ್ರತಿಬಿಂಬಿಸುತ್ತದೆಯೇ ಹೊರತು ಪಕ್ಷದ ನಿಲುವು ಅಲ್ಲ ಎಂದು ಹೇಳಿದೆ. ಅಲ್ಲದೆ, ನಾಲ್ಕು ಬಾರಿ ಸಂಸದರಾಗಿರುವ ಹೆಗಡೆ ಅವರಿಂದಲೂ ಪಕ್ಷ ವಿವರಣೆಯನ್ನು ಕೇಳಿದೆ.

ದ್ವೇಷದ ಭಾಷಣಗಳಿಗೆ ಸಂಬಂಧಿಸಿದಂತೆ ಪುನರಾವರ್ತಿತ ಅಪರಾಧಿಯಾಗಿರುವ ಹೆಗಡೆ, ಅವರು ಈ ಹಿಂದೆಯೂ ಹಲವು ಬಾರಿ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿ ನಾಯಕತ್ವವನ್ನು ಪೇಚಿಗೆ ಸಿಲುಕಿಸಿದ್ದರು. ಸದ್ಯ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿರುವ ಬಿಜೆಪಿ ದೆಹಲಿ ವರಿಷ್ಠರು, ಹೆಗಡೆಯವರ ಈ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ. ಅದರಿಂದಾಗಿ, ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್‌ ನೀಡದಿರುವ ದಟ್ಟ ಸಾಧ್ಯತೆ ಇದೆ ಎಂದು ಪಕ್ಷದ ಆಂತರಿಕ ಮೂಲಗಳು ಸೂಚಿಸಿದೆ ಎಂದು NDTV ವರದಿ ಮಾಡಿದೆ.

ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ತೀವ್ರ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಎರಡನೇ ಪಟ್ಟಿಯು ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.

ಬಿಜೆಪಿಯ 195 ಸ್ಥಾನಗಳ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದ ಕೆಲವು ಸಂಸದರ ಹೆಸರು ಮೊದಲ ಪಟ್ಟಿಯಲ್ಲಿರಲಿಲ್ಲ. ಇವರಲ್ಲಿ ಸಂಸದರಾದ ರಮೇಶ್ ಬಿಧುರಿ ಮತ್ತು ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಮತ್ತು ಪ್ರಜ್ಞಾ ಸಿಂಗ್ ಠಾಕೂರ್ ಸೇರಿದ್ದಾರೆ.

“ಪಕ್ಷ ಗೆಲ್ಲುವುದು ಮುಖ್ಯ ಆದರೆ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ನಾಯಕತ್ವವನ್ನು ಮುಜುಗರಕ್ಕೀಡು ಮಾಡಿದ ಅಭ್ಯರ್ಥಿಗಳನ್ನು ಪಕ್ಷವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅವರಿಗೆ ಟಿಕೆಟ್ ನಿರಾಕರಣೆ ಮಾಡಿ ಸಾರ್ವಜನಿಕ ಜೀವನದಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಸಂದೇಶವನ್ನು ರವಾನಿಸುತ್ತದೆ. ಈ ಹಿಂದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ಪ್ರಧಾನಿ ಹಲವು ಸಂದರ್ಭಗಳಲ್ಲಿ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದ್ದರು'' ಎಂದು ಬಿಜೆಪಿ ನಾಯಕರೊಬ್ಬರು ndtv.com ಗೆ ಹೇಳಿದ್ದಾರೆ.

ಸಂವಿಧಾನದಲ್ಲಿ ಮೂಲಭೂತ ಬದಲಾವಣೆ ಆಗಬೇಕೆಂದು ಪ್ರತಿಪಾದಿಸಿದ್ದ ಹೆಗಡೆ, ನರೇಂದ್ರ ಮೋದಿ ಅವರು ಈ ಬಾರಿ 400 ಕ್ಕೂ ಅಧಿಕ ಸೀಟುಗಳನ್ನು ಕೇಳಿದ್ದಾರೆ. ಯಾಕೆಂದರೆ, ಸಂವಿಧಾನ ಬದಲಾವಣೆಗೆ ಈಗಿರುವ ಬಹುಮತ ಸಾಕಾಗದು. ರಾಜ್ಯಸಭೆಯಲ್ಲೂ, ರಾಜ್ಯಸರ್ಕಾರಗಳಲ್ಲೂ ನಮಗೆ (ಬಿಜೆಪಿ) 2/3 ರಷ್ಟು ಬಹುಮತ ಬೇಕಿದೆ. ಸಂವಿಧಾನದಲ್ಲಿ ಹಿಂದೂ ಸಮಾಜವನ್ನು ದಮನಿಸುವ ಹಲವಾರು ಅಂಶಗಳು ಇದೆ ಎಂದು ಅನಂತಕುಮಾರ್‌ ಹೆಗಡೆ ಅವರು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News