SFI ಜಿಲ್ಲಾಧ್ಯಕ್ಷ ವಿಜಯ್ ಫೋಟೋ ಹಾಕಿ ಈತನೇ ಮನೋರಂಜನ್ ಎನ್ನುತ್ತಿರುವ ಬಿಜೆಪಿ ಖಾತೆಗಳು!

Update: 2023-12-13 19:15 GMT
ಮನೋರಂಜನ್‌ ಎಂದು ವೈರಲಾದ ಟಿ ಎಸ್‌ ವಿಜಯ್‌ ಕುಮಾರ್‌ ಅವರ ಚಿತ್ರ | Photo : fb.com/JagadishSurya

ಮೈಸೂರು : SFI ಮೈಸೂರು ಜಿಲ್ಲಾಧ್ಯಕ್ಷ ಟಿ ಎಸ್‌ ವಿಜಯ್‌ ಕುಮಾರ್ ಅವರ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಖಾತೆಗಳು ಸಂಸತ್‌ ದಾಳಿಯಲ್ಲಿ ಭಾಗಿಯಾದ ಮನೋರಂಜನ್ ಎಂದು ಪೋಸ್ಟ್‌ ಹಂಚಿ, ಸಂಸತ್ತಿಗೆ ನುಗ್ಗಿದವನು ಎಡಪಂಥೀಯ ಎಂದು ಬಿಂಬಿಸಲು ಸುಳ್ಳು ಪ್ರಚಾರ ಮಾಡಿರುವ ಘಟನೆ ಬುಧವಾರ ಸಂಜೆ ವರದಿಯಾಗಿದೆ. 

ಶಿವಮೊಗ್ಗ ಹೈಕ್ಳು ಎಂಬ ಪೇಜ್‌ ನಲ್ಲಿ “ಸಂಸತ್‌ ಮೇಲೆ ದಾಳಿ ಮಾಡಿದ, ಮೈಸೂರಿನ ಅರ್ಬನ್‌ ನಕ್ಸಲ್‌, ಕಮ್ಯೂನಿಸ್ಟ್ ಖದೀಮ.. ಮನೋರಂಜನ್”, ಬಿಜೆಪಿ ಹುಣಸೂರು ಬಿಜೆಪಿ ಪೇಜ್‌ ನಲ್ಲಿ “SFI ಸಮ್ಮೇಳನದಲ್ಲಿ ಕ್ಷೇತ್ರ ಪ್ರಜೆಯಾಗಿ ಪಾಸ್‌ ಪಡೆದು ಕುಕೃತ್ಯ ಎಸಗಿದ ಮನೋರಂಜನ್‌!! ಪ್ರತಾಪ್‌ ಸಿಂಹರಿಗೆ ಕೆಟ್ಟ ಹೆಸರು ತರುವ ಕೆಲಸ ಬಿಟ್ಟುಬಿಡಿ ಕಾಂಗ್ರೆಸಿಗರೇ”, ಎಂದು ಕುಲುಮೆ, ನಮೋ ಸಪೋರ್ಟರ್ಸ್‌ ಮತ್ತಿತರ ಫೇಸ್‌ ಬುಕ್‌ ಪೇಜುಗಳು ಪೋಸ್ಟ್‌ ಹಂಚಿಕೊಂಡವು.

 ಪೋಸ್ಟ್‌ ವೈರಲಾಗುತ್ತಿದ್ದಂತೆ ಪೊಲೀಸರು, ಮಾಧ್ಯಮದವರಿಂದ ʼವಿಚಾರಣೆʼ ಎದುರಿಸಿದ ಟಿ ಎಸ್‌ ವಿಜಯ್ ಕುಮಾರ್‌ ಗೆ ಬಹಳಷ್ಟು ಕರೆಗಳು ಬಂದಿತು ಎಂದು ತಿಳಿದು ಬಂದಿದೆ. ಬಳಿಕ ಹಿತೈಷಿಗಳು, SFI ಸಂಘಟನೆಯ ಸದಸ್ಯರು ಸುಳ್ಳು ಸುದ್ದಿ ಹಬ್ಬುವಿಕೆಯಿಂದ ಕುಗ್ಗದಂತೆ ಅವರಿಗೆ ಧೈರ್ಯ ತುಂಬಿದರು ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ʼವಾರ್ತಾಭಾರತಿʼಯೊಂದಿಗೆ ಮಾತನಾಡಿದ SFI ನ ಮೈಸೂರು ವಿಭಾಗದ ಮಾಜಿ ಜಿಲ್ಲಾಧ್ಯಕ್ಷ ಜಗದೀಶ್‌ ಸೂರ್ಯ, “ಬಿಜೆಪಿ ಐಟಿ ಸೆಲ್‌ ಸಂಸತ್‌ ದಾಳಿಯಲ್ಲಿ ಭಾಗಿಯಾದ ಮನೋರಂಜನ್‌ ಎಂದು ನಮ್ಮ ಈಗಿನ ಜಿಲ್ಲಾಧ್ಯಕ್ಷ ಟಿ ಎಸ್‌ ವಿಜಯ್‌ ಕುಮಾರ್ ಅವರ ಫೊಟೋ ಹಂಚಿಕೊಂಡಿದೆ. ಸಂಜೆಯಿಂದ ವಿಜಯ್‌ ಕುಮಾರ್ ಅವರಿಗೆ ಪೊಲೀಸರಿಂದ, ಮಾಧ್ಯಮದವರಿಂದ ಕರೆ ಬಂದಿದೆ. ಆತ ಕಿರಿಕಿರಿ ಅನುಭವಿಸಿದ್ದಾನೆ. ನಾವೆಲ್ಲರೂ ಸಮಾಧಾನ ಮಾಡಿದ್ದೇವೆ. ಗುರುವಾರ ಪೊಲೀಸ್‌ ಸೈಬರ್‌ ಠಾಣೆಗೆ ಈ ಬಗ್ಗೆ ದೂರು ನೀಡಲಿದ್ದೇವೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿದ್ದೇವೆ” ಎಂದರು.

ಸುಳ್ಳು ಸುದ್ದಿಯ ಫೇಸ್ ಬುಕ್‌ ಪೋಸ್ಟ್‌ ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಜಗದೀಶ್‌ ಸೂರ್ಯ, "BJP ಯ ಬಂಡವಾಳವೇ ಸುಳ್ಳು ,ಅಪಪ್ರಚಾರವೆಂದು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ ಈ ಸುದ್ದಿ. ಈ ಫೋಟೋದಲ್ಲಿರುವ ಹುಡುಗನ ಹೆಸರು ಟಿ.ಎಸ್.ವಿಜಯ್‌ಕುಮಾರ್ SFI ಜಿಲ್ಲಾಧ್ಯಕ್ಷ. ಪಾರ್ಲಿಮೆಂಟ್ ದಾಳಿಯ ಮನೋರಂಜನ್‌ಗೂ SFI ಮತ್ತು ವಿಜಯ್ ಕುಮಾರ್ ಗೂ ಸಂಬಂಧವಿಲ್ಲ. ಮನೋರಂಜನ್ ತಂದೆಯೇ ನನ್ನ ಮಗ ಮೋದಿ ಅಭಿಮಾನಿ ಎಂದು ಮಾಧ್ಯಮದ ಎದುರೇ ಹೇಳಿದ್ದಾರೆ. ಆದರೆ BJP ಯವರು ತಮ್ಮ ವೈಫಲ್ಯವನ್ನು ಮರೆ ಮಾಚಲು, ವಿಷಾಯಾಂತರ ಮಾಡಲು ಸುಳ್ಳಿನ ಮೊರೆ ಹೋಗಿದ್ದಾರೆ. ಕೂಡಲೇ ಈ ಬಗ್ಗೆ ಪೋಲೀಸ್ ಇಲಾಖೆ ತನಿಖೆ ನಡೆಸಿ ಅಪಪ್ರಚಾರ ಮಾಡುವವರ ಮೇಲೆ ಶೀಘ್ರವೇ ಕ್ರಮಕೈಗೊಳ್ಳಲಿ” ಎಂದು ಪೋಸ್ಟ್‌ ಮಾಡಿದ್ದರು.


ಪೋಸ್ಟ್‌ ವೈರಲಾಗುತ್ತಿದ್ದಂತೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ತಮ್ಮ ಫೇಸ್ ಬುಕ್ ಪೋಸ್ಟ್  ನಲ್ಲಿ, “ಬಿಜೆಪಿ ಕಾರ್ಯಕರ್ತರು, ಮೋದಿ ಭಕ್ತರು ಎಂತಹ ನಿರ್ಲಜ್ಜರು ಅಂದರೆ, ಸಂಸತ್ ನ ಒಳಭಾಗಕ್ಕೆ ನುಗ್ಗಿದ ಮನೋರಂಜನ್ ನನ್ನು SFI ಮೈಸೂರು ಜಿಲ್ಲಾಧ್ಯಕ್ಷ ಕಾಮ್ರಡ್ ವಿಜಯ್ ಕುಮಾರ್ ಅಂತ ಬಿಂಬಿಸುವ ಸುಳ್ಳು ಪ್ರಚಾರ ಶುರು ಮಾಡಿದ್ದಾರೆ. ಮನೋರಂಜನ್ ಮೋದಿ ಭಕ್ತ, ಪ್ರತಾಪ ಸಿಂಹ ಅನುಯಾಯಿ ಅಂತ ಸ್ವತಃ ಮನೋರಂಜನ್ ತಂದೆ ಮೀಡಿಯಾ ಮುಂದೆ ಹೇಳಿದ್ದಾರೆ. ಆದರೂ ಸಂಘಗಳ ಭಂಡತನ, ಮರ್ಯಾದೆಗಟ್ಟ ಚಾಳಿ ಮುಂದುವರಿದಿದೆ. ವಿಜಯ್ ಕುಮಾರ್ ಚಿತ್ರ ಬಳಸಿ, ಮನೋರಂಜನ್ SFI ಮುಖಂಡ, ದಾಳಿಯ ಹಿಂದೆ ಕಮ್ಯೂನಿಸ್ಟರಿದ್ದಾರೆ ಎಂದು IT ಸೆಲ್ ಮೂಲಕ ವಾಟ್ಸಪ್ ಯೂನಿವರ್ಸಿಟಿಯಲ್ಲಿ ಪ್ರಚಾರ ಶುರು ಮಾಡಿದ್ದಾರೆ. ನಕಲಿ ದೇಶಪ್ರೇಮಿಗಳು, ಮೋದಿ (ಮೊದಾನಿ) ಭಕ್ತರಲ್ಲಿ ನಮಗೆ ಹೇಳಲಿರುವುದು ಇಷ್ಟು, ಈ ಕುರಿತು ಪೊಲೀಸ್ ದೂರು ದಾಖಲಿಸಲಿದ್ದೇವೆ. ಮತ್ತೆ ನಾವು ಏನಾದರು ಮಾಡುವುದಿದ್ದರೆ ಅದನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುತ್ತೇವೆ, ನಮ್ಮ ಉದ್ದೇಶವನ್ನು ಜನತೆಗೆ ಸ್ಪಷ್ಟವಾಗಿ ತಿಳಿಸುತ್ತೇವೆ. ಮನೆಹಾಳು ಕೆಲಸ ಮಾಡುವದೂ ಇಲ್ಲ, ಬೇರೆಯವರ ಮೂತಿಗೆ ಒರೆಸುವುದೂ ಇಲ್ಲ. ನಮ್ಮಲ್ಲಿ ಹರಿಯುವುದು ಕಾಮ್ರಡ್ ಭಗತ್ ಸಿಂಗ್ ರಕ್ತ, ಸಾವರ್ಕರ್ ರಕ್ತ ಅಲ್ಲ” ಎಂದು ಕಿಡಿ ಕಾರಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News