ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ತಿದ್ದುಪಡಿ ಮಾಡುತ್ತಾರೆ: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೆ ಅಧಿಕಾರಕ್ಕೆ ಬಂದರೆ ನೂರಕ್ಕೆ ನೂರರಷ್ಟು ಭಾಗ ಸಂವಿಧಾನ ತಿದ್ದುಪಡಿ ಮಾಡುತ್ತಾರೆ. ಅವಕಾಶ ಸಿಕ್ಕರೆ ಮೋದಿ ಬದುಕಿರುವವರೆಗೂ ಅವರೇ ಪ್ರಧಾನಮಂತ್ರಿ ಎಂಬ ತಿದ್ದುಪಡಿಯನ್ನು ತರಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಬಂಧನವನ್ನು ಖಂಡಿಸಿ ಆಪ್ ಆಯೊಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಜ್ರಿವಾಲ್ ಬಂಧನಕ್ಕೆ ಒಂದು ವರ್ಷದಿಂದ ಪ್ರಯತ್ನ ನಡೆಯುತ್ತಿತ್ತು. ಕೇಜ್ರಿವಾಲ್ ಗೆದ್ದಿರುವುದು ಬಿಜೆಪಿಗೆ ಸಹಿಸಿಕೊಳ್ಳಲು ಆಗದೇ, ಅಧಿಕಾರದಿಂದ ಇಳಿಸುವ ಹುನ್ನಾರದಿಂದ ಅವರನ್ನು ಬಂಧಿಸಲಾಗಿದೆ ಎಂದು ದೂರಿದರು.
ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲ. ಯಾಕೆಂದರೆ ‘ಬಿಜೆಪಿ ಎಂದರೆ ಭ್ರಷ್ಟ ಜನರ ಪಕ್ಷ’. ಬಿಜೆಪಿಯವರ ಪೂರ್ವಜರು ಆರೆಸ್ಸೆಸ್‍ನವರು ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಆರೆಸ್ಸೆಸ್ ಮತ್ತು ಬಿಜೆಪಿಗೆ ಪ್ರಜಾಪ್ರಭುತ್ವ, ಸಮಾನತೆ, ಸಂವಿಧಾನ ಯಾವುದೂ ಬೇಕಾಗಿಲ್ಲ. ದೇಶದಲ್ಲಿ ಈಗಾಗಲೇ ಸರ್ವಾಧಿಕಾರ ಬಂದಿದೆ. ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಎಲ್ಲರೂ ಸುಳ್ಳನ್ನೇ ಹೇಳುತ್ತಾರೆ. ಅದಕ್ಕೆ ನಾನು ಬಿಜೆಪಿ ಎಂದರೆ ‘ಬುಲ್ಡೆ ಜನರ ಪಕ್ಷ’ ಎಂದು ಕರೆಯುತ್ತೇನೆ ಎಂದು ಕಿಡಿಕಾರಿದರು.
ಸುಳ್ಳು ಸೃಷ್ಠಿ ಮಾಡಲು ಸುಮಾರು 600 ರಿಂದ 700 ಜನರು ಕೆಲಸ ಮಾಡುತ್ತಿದ್ದಾರೆ. ಸುಳ್ಳಿಗಾಗಿಯೇ ವಾಟ್ಸ್ ಆಪ್ ವಿವಿ ಪ್ರಾರಂಭಿಸಿದ್ದಾರೆ. ಹಾಗೂ ‘ಬಿಜೆಪಿ ಎಂದರೆ ಭ್ರಷ್ಟ ಜನರ ಪಕ್ಷ’ವೂ ಆಗಿದೆ. ಬೇರೆ ಬೇರೆ ಪಕ್ಷದಲ್ಲಿರುವ ಭ್ರಷ್ಟರನ್ನು ಬಿಜೆಪಿಗೆ ಸೇರಿಸಿಕೊಂಡು ಎಲ್ಲ ಭ್ರಷ್ಟರನ್ನು ಕ್ಲೀನ್‍ಚಿಟ್ ಮಾಡಲಾಗಿದೆ ಎಂದು ಹೇಳಿದರು.
ಮೋದಿ ಪ್ರಧಾನಿಯಾದರೆ ನಾನು ದೇಶ ಬಿಟ್ಟುಹೋಗುತ್ತೇನೆ ಎಂದು ಹೇಳಿದ ದೇವೇಗೌಡ ಅವರು, ಮೋದಿ ಒಳ್ಳೆಯವರು ಎಂದು ಪ್ರಮಾಣ ಪತ್ರ ನೀಡಿದ್ದಾರೆ. ರಾಜ್ಯದಲ್ಲಿ 27 ಜನ ಬಿಜೆಪಿ ಸಂಸದರಿದ್ದರೂ 223 ತಾಲೂಕಿಗೆ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದಾಗ 1 ರೂ.ಅನುದಾನವನ್ನು ತರಲಿಲ್ಲ. ಅದನ್ನು ಕೇಳುವ ತಾಕತ್ತು ರಾಜ್ಯದ ಬಿಜೆಪಿ ಸಂಸದರಿಗೆ ಇಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಬಿಜೆಪಿಗೆ ಸೇರಿದ ತಕ್ಷಣ ಭ್ರಷ್ಟರೆಲ್ಲರು ಸತ್ಯ ಹರಿಶ್ಚಂದ್ರರಾಗುತ್ತಾರೆ. ಅದಕ್ಕಾಗಿ ಬಿಜೆಪಿ ಪಕ್ಷ ತೊಲಗಬೇಕು. ಇಲ್ಲವಾದರೆ ದೇಶಕ್ಕೆ ನೆಮ್ಮದಿ ಇಲ್ಲ. ಸಂವಿಧಾನ ಬದಲಾಯಿಸಿದರೆ ಸ್ವಾತಂತ್ರ್ಯ ಪೂರ್ವದಲ್ಲಿ ನಾವು ಹೇಗಿದ್ದೆವೋ.. ಅಲ್ಲಿಗೆ ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. ಕೇಜ್ರಿವಾಲ್ ಅಪರಾಧಿಯೋ ನಿರಪರಾಧಿಯೋ ಎಂಬುದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತದೆ. ಹಿಂದೆ 2ಜಿ ಹಗರಣ, ಕಲ್ಲಿದ್ದಲು ಹಗರಣದ ಬಗ್ಗೆ ಆರೋಪ ಮಾಡಿದ್ದರೂ ಆದರೆ ಯಾವುದನ್ನೂ ಸಾಬೀತು ಮಾಡಲಿಲ್ಲ. ಬಿಜೆಪಿಗೆ ಚುನಾವಣಾ ಬಾಂಡ್ ಹೆಸರಲ್ಲಿ ಒಟ್ಟು 9ಸಾವಿರ ಕೋಟಿ ರೂ.ದೇಣಿಗೆ ಬಂದಿದೆ. ಬಿಜೆಪಿ, ಮೋದಿ, ಅಮಿತ್‍ಶಾ ಸೇರಿಕೊಂಡು ದೇಶದ ಜನರು ತಲೆ ತಗ್ಗಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.