‘ಚರ್ಚೆಗೆ ಅವಕಾಶದ ಭರವಸೆ’ ಝಮೀರ್ ವಿರುದ್ಧದ ಧರಣಿ ಹಿಂಪಡೆದ ಬಿಜೆಪಿ

Update: 2023-12-12 11:22 GMT

ಬೆಳಗಾವಿ: ಸ್ಪೀಕರ್ ಸ್ಥಾನದ ಕುರಿತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಜಂಟಿಯಾಗಿ ನಿನ್ನೆಯಿಂದ ನಡೆಸುತ್ತಿದ್ದ ಧರಣಿಯನ್ನು ವಾಪಸ್ ಪಡೆದರು.

ಮಂಗಳವಾರ ವಿಧಾನಸಭೆಯ ಕಲಾಪದ ಆರಂಭದಲ್ಲೇ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಬಿಜೆಪಿ-ಜೆಡಿಎಸ್ ಸದಸ್ಯರು ತಮ್ಮ ಧರಣಿಯನ್ನು ಮುಂದುವರೆಸಿದರು. ಈ ವೇಳೆ ಎದ್ದುನಿಂತು ಮಾತನಾಡಿದ ಗೃಹ ಸಚಿವ ಡಾ.ಪರಮೇಶ್ವರ್, ‘ಇಡೀ ದೇಶವೇ ನಮ್ಮನ್ನು ನೋಡುತ್ತಿದೆ. ಸದನದಲ್ಲ್ಲಿ ಗಂಭೀರ ಚರ್ಚೆಗಳು ನಡೆಯಬೇಕು. ನಿನ್ನೆಯಿಂದಲೂ ಧರಣಿ ನಡೆಸುತ್ತಿದ್ದೀರಿ. ಇದರಿಂದ ಪ್ರಶ್ನೋತ್ತರ ಕಲಾಪ, ಶೂನ್ಯವೇಳೆ ಗಮನ ಸೆಳೆಯುವ ಸೂಚನೆ ಸೇರಿದಂತೆ ಮಹತ್ವದ ಕಲಾಪಗಳಲ್ಲಿ ಪ್ರತಿಪಕ್ಷಗಳ ಸದಸ್ಯರು ಭಾಗವಹಿಸಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬರ ಪರಿಸ್ಥಿತಿಯ ಮೇಲೆ ಚರ್ಚೆಯಾಗಿದೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಚರ್ಚೆಗಳು ನಡೆಯಬೇಕಿದೆ. ಅದರಲ್ಲಿ ಎಲ್ಲರೂ ಭಾಗವಹಿಸಬೇಕು. ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಧರಣಿ ಕೈಬಿಟ್ಟು ವಿಪಕ್ಷಗಳ ಸದಸ್ಯರು ಕಲಾಪದಲ್ಲಿ ಭಾಗವಹಿಸಬೇಕು ಎಂದು ಪರಮೇಶ್ವರ್ ಎಂದು ಮನವಿ ಮಾಡಿದರು.

ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ‘ಗೃಹ ಸಚಿವರು ಇದೇ ಮಾತುಗಳನ್ನು ನಿನ್ನೆಯೇ ಹೇಳಬಹುದಿತ್ತು. ಆದರೆ ನಮ್ಮನ್ನು ಸತಾಯಿಸಿ ಕಾಲಾಹರಣ ಮಾಡಲಾಗಿದೆ. ಸರಕಾರದ ದೌರ್ಜನ್ಯಗಳು ಹೆಚ್ಚಾಗಿವೆ. ಕೂಗಾಡಿ ನಮ್ಮ ಗಂಟಲು ಒಣಗಿದೆ. ಕಲಾಪದಲ್ಲಿ ತಾವು ಭಾಗವಹಿಸಲಾಗಿಲ್ಲ. ಸರಕಾರ ನಾವು ಧರಣಿಯಲ್ಲಿರುವ ವೇಳೆ ವಿವಿಧ ಮಸೂದೆಗಳನ್ನು ಪಾಸ್ ಮಾಡಿಕೊಂಡಿದೆ’ ಎಂದು ದೂರಿದರು.

‘ಸ್ಪೀಕರ್ ಪೀಠಕ್ಕೆ ಅಗೌರವ ಆಗಿದೆ ಎಂಬುದಷ್ಟೇ ನಮ್ಮ ಕಳಕಳಿ. ಇದರಲ್ಲಿ ವೈಯಕ್ತಿಕ ವಿಚಾರಗಳಿಲ್ಲ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಯಾಗಬೇಕೆಂಬುದು ನಮ್ಮ ಕಾಳಜಿ. ಬಸನಗೌಡ ಪಾಟೀಲ್ ಯತ್ನಾಳ್ ಈ ಬಗ್ಗೆ ತಮ್ಮೊಂದಿಗೆ ಚರ್ಚೆ ಮಾಡಿದ್ದಾರೆ. ನಾವು ಧರಣಿ ಹಿಂಪಡೆಯುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗಳ ಕುರಿತು ಚರ್ಚೆಯನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಈ ವೇಳೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್, ಝಮೀರ್ ಅಹ್ಮದ್ ಖಾನ್ ತನ್ನ ಹೇಳಿಕೆ ಬಗ್ಗೆ ಈಗಾಗಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅದರ ಹೊರತಾಗಿಯೇ ಸರಕಾರ, ವಿಪಕ್ಷಗಳು ಮತ್ತು ತನ್ನ ಪೀಠದ ಪ್ರತ್ಯೇಕ ಅಭಿಪ್ರಾಯಗಳನ್ನು ಹೊಂದಿರುವುದು ಸಲ್ಲ. ಹೇಳಿಕೆ ನೀಡಿ ಒಂದು ತಿಂಗಳು ಕಳೆದಿವೆ. ವಾರದಿಂದ ಸದನ ಉತ್ತಮವಾಗಿ ನಡೆಯುತ್ತಿತ್ತು. ವಿಪಕ್ಷ ನಾಯಕರು ನಿನ್ನೆ ಏಕಾಏಕಿ ವಿಷಯ ಪ್ರಸ್ತಾಪಿಸಿ ಧರಣಿ ನಡೆಸುವುದು ಸರಿಯಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News