ಜಾತಿಗಣತಿ ವರದಿ ಬಿಡುಗಡೆಗೆ ಸೂಚಿಸುವಂತೆ ಹೈಕಮಾಂಡ್‍ಗೆ ಬಿ.ಕೆ. ಹರಿಪ್ರಸಾದ್ ಮನವಿ
ಹೊಸದಿಲ್ಲಿ: ಕರ್ನಾಟಕದಲ್ಲಿ ಜಾತಿಗಣತಿ ವರದಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಸೂಚನೆ ನೀಡಬೇಕೆಂದು ಒತ್ತಾಯಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮನವಿ ಮಾಡಿದ್ದಾರೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ಉಭಯ ನಾಯಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿರುವ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು 160 ಕೋಟಿ ರೂ. ಖರ್ಚು ಮಾಡಿ ಜಾತಿ ಗಣತಿ ವರದಿಯನ್ನು 2018ರಲ್ಲೇ ಸಿದ್ಧಪಡಿಸಿದೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ, ಬಿಜೆಪಿ ಸರಕಾರದ ಅವಧಿಯಲ್ಲಿ ಈ ವರದಿ ಬಿಡುಗಡೆಯಾಗಲಿಲ್ಲ ಎಂದರು.
ಸದ್ಯ ನಮ್ಮ ಸರಕಾರ ಬಂದು ಒಂದೂವರೆ ವರ್ಷ ಕಳೆದು ಹೋಗಿದೆ. ಇಷ್ಟರಲ್ಲಿ ಜಾತಿಗಣತಿ ವರದಿ ಬಿಡುಗಡೆಗೆ ಆದ್ಯತೆ ನೀಡಬೇಕಿತ್ತು. ಆದರೆ, ಅನಗತ್ಯ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಈ ಸಂಬಂಧ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ರಾಜ್ಯ ಸರಕಾರಕ್ಕೆ ಸೂಚನೆ ಕೊಟ್ಟು ವರದಿ ಬಿಡುಗಡೆಗೆ ಗಡುವು ನೀಡಬೇಕು ಎಂದು ಬಿ.ಕೆ.ಹರಿಪ್ರಸಾದ್ ಮನವಿ ಮಾಡಿದರು.