2024-25ನೆ ಸಾಲಿನಲ್ಲಿ 4,930 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದ ಬಿಬಿಎಂಪಿ
ಬೆಂಗಳೂರು : 2024-25ನೆ ಸಾಲಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳಿಂದ 4,930 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಮಾಡಲಾಗಿದ್ದು, 2023-24ನೆ ಸಾಲಿಗೆ ಹೋಲಿಸಿದರೆ 1,000 ಕೋಟಿ ರೂ.ಗಳಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹಣೆಯಾಗಿದೆ.
2023-24 ನೇ ಸಾಲಿನಲ್ಲಿ ರೂ.3,918 ಕೋಟಿ ಆಸ್ತಿ ತೆರಿಗೆ ಸಂಗ್ರಹಣೆಯಾಗಿತ್ತು. 2025-26ನೇ ಹಣಕಾಸು ವರ್ಷದಲ್ಲಿ 6,000 ಕೋಟಿ ರೂ.ಗಳ ಆಸ್ತಿ ತೆರಿಗೆ ಸಂಗ್ರಹಣೆಯ ಗುರಿಯನ್ನು ಇಟ್ಟುಕೊಳ್ಳಲಾಗಿದೆ.
2024-25 ರಲ್ಲಿ ಒಂದು ಬಾರಿ ಪರಿಹಾರ ಯೋಜನೆ(ಒಟಿಎಸ್) ಜಾರಿ ಮಾಡಲಾಗಿತ್ತು. ಬಾಕಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡಲು ಅನುಸರಿಸಿದ ಪ್ರಮಾಣಿತ ಕಾರ್ಯಾಚರಣೆ ವಿಧಾನ ಅನುಸರಿಸಲಾಯಿತು. ಮನೆ-ಮನೆಗೆ ಭೇಟಿ ನೀಡಿ, ಆಸ್ತಿ ತೆರಿಗೆಯನ್ನು ವಸೂಲಿ ಮಾಡಲಾಯಿತು. ಹೀಗಾಗಿ ಆಸ್ತಿ ತೆರಿಗೆ ಪಾವತಿಯಲ್ಲಿ ಹೆಚ್ಚಳವಾಗಿದೆ ಎಂದು ಬಿಬಿಎಂಪಿ ಹೇಳಿದೆ.
ಬೊಮ್ಮನಹಳ್ಳಿ ವಲಯದಲ್ಲಿ 492 ಕೋಟಿ ರೂ, ದಾಸರಹಳ್ಳಿಯಲ್ಲಿ 152 ಕೋಟಿ ರೂ, ಪೂರ್ವ ವಲಯದಲ್ಲಿ 834 ಕೋಟಿ ರೂ, ಮಹದೇವಪುರ ವಲಯದಲ್ಲಿ 1,310 ಕೋಟಿ ರೂ, ರಾಜರಾಜೇಶ್ವರಿ ನಗರದ ವಲಯದಲ್ಲಿ 381 ಕೋಟಿ ರೂ, ದಕ್ಷಿಣ ವಲಯದಲ್ಲಿ 733 ಕೋಟಿ ರೂ, ಪಶ್ಚಿಮ ವಲಯದಲ್ಲಿ 562 ಕೋಟಿ ರೂ ಮತ್ತು ಯಲಹಂಕ ವಲಯದಲ್ಲಿ 464 ಕೋಟಿ ರೂ. ಆಸ್ತಿ ತೆರಿಗೆ 2024-25 ರಲ್ಲಿ ಸಂಗ್ರಹವಾಗಿದೆ.