KEA ಪರೀಕ್ಷೆಗಳಲ್ಲಿ ಬ್ಲೂಟೂತ್ ಬಳಕೆ ಪ್ರಕರಣ; ಆರೋಪಿ ಆರ್.ಡಿ. ಪಾಟೀಲ್ ಪರಾರಿ: CCTVಯಲ್ಲಿ ದೃಶ್ಯ ಸೆರೆ

Update: 2023-11-07 07:10 GMT

 CCTV ದೃಶ್ಯ 

ಕಲಬುರಗಿ: ಪಿಎಸ್ಐ ಮತ್ತು ಕೆಇಎ ಪರೀಕ್ಷೆಗಳಲ್ಲಿ ಆಕ್ರಮ ನಡೆಸಿದ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ಜೇವರ್ಗಿ ರಸ್ತೆಯ ಫ್ಲಾಟ್ ಒಂದರಲ್ಲಿ ಪೊಲೀಸರು ಬಂಧಿಸಲು ಬಂದಿರುವ ವೇಳೆ ತಪ್ಪಿಸಿಕೊಂಡು ಪರಾರಿಯಾಗಿರುವುದು ವರದಿಯಾಗಿದೆ.

ಆತ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಆರೋಪಿ ಆರ್.ಡಿ ಪಾಟೀಲ್ ಸೋಮವಾರ ಇಲ್ಲಿನ ವರ್ಧಾ ನಗರದಲ್ಲಿರುವ ಫ್ಲಾಟ್ ಒಂದರಲ್ಲಿ ಅಡಗಿಕೊಂಡಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಆತ ಫ್ಲಾಟ್ ನ ಕಾಂಪೌಂಡ್ ಮೇಲಿಂದ ಹಾರಿ ತಪ್ಪಿಸಿಕೊಂಡು ಹೋಗಿದ್ದಾನೆನ್ನಲಾಗಿದೆ. 

ಇತ್ತೀಚೆಗೆ ನಡೆದಂತಹ ರಾಜ್ಯದ ನಿಗಮ, ಮಂಡಳಿಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದಂತಹ ಲಿಖಿತ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ ನಡೆದ ಪರೀಕ್ಷಾ ಅಕ್ರಮದಲ್ಲಿ ತನ್ನ ಹೆಸರು ಪ್ರಸ್ತಾಪವಾಗಿದ್ದಲ್ಲದೆ, ಪೊಲೀಸ್‌ ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರ್.ಡಿ. ಪಾಟೀಲ ತಲೆ ಮರೆಸಿಕೊಂಡಿದ್ದ.

ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಬ್ಲೂಟೂತ್‌ ವ್ಯವಸ್ಥೆ ಮಾಡಿಕೊಡಲು ಕಲಬುರಗಿ ನಗರಕ್ಕೆ ಬಂದು ವಸತಿ ಸಮುಚ್ಚಯ ಒಂದರಲ್ಲಿ ತಂಗಿದ್ದ ಎಂದು ಹೇಳಲಾಗಿತ್ತಿದೆ.

ಈ ಹಿಂದೆ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದ ಆರ್.ಡಿ ಪಾಟೀಲ್!

ಈ ಹಿಂದೆ (2023ರ ಜನವರಿ 20) ಪಿಎಸ್ಐ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ವಾರೆಂಟ್ ನೀಡಲು ಸಿಐಡಿ ಅಧಿಕಾರಿಗಳು ಆರ್.ಡಿ‌. ಪಾಟೀಲ್ ‌ಮನೆಗೆ ತೆರಳಿದ್ದ ವೇಳೆ  ಆತ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದ ಘಟನೆ ವರದಿಯಾಗಿತ್ತು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News