ಮ್ಯೂಸಿಯಂಗಳಿಗೆ ಬಾಂಬ್ ಬೆದರಿಕೆ ಸಂದೇಶ ಪ್ರಕರಣ: ಮೂರು ಪ್ರತ್ಯೇಕ ಎಫ್‍ಐಆರ್ ದಾಖಲು

Update: 2024-01-06 13:19 GMT

ಬೆಂಗಳೂರು: ಕೇಂದ್ರ ವಿಭಾಗದ ಮೂರು ಠಾಣಾ ವ್ಯಾಪ್ತಿಯ ವಸ್ತು ಸಂಗ್ರಹಾಲಯಗಳಿಗೆ ಬಂದಿದ್ದ ಬಾಂಬ್ ಬೆದರಿಕೆ ಇಮೇಲ್ ಸಂಬಂಧ ನಗರದ ಕಬ್ಬನ್ ಪಾರ್ಕ್, ವಿಧಾನಸೌಧ ಹಾಗೂ ಹೈಗ್ರೌಂಡ್ಸ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್.ಎಚ್.ಟಿ ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ನಗರದ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಕಸ್ತೂರಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಆ್ಯಂಡ್ ಟೆಕ್ನಾಲಜಿಕಲ್ ಮ್ಯೂಸಿಯಂ, ವಿಧಾನಸೌಧ ಠಾಣಾ ವ್ಯಾಪ್ತಿಯ ರಾಜಭವನ ರಸ್ತೆಯಲ್ಲಿರುವ ಜವಾಹರಲಾಲ್ ನೆಹರು ತಾರಾಲಯ ಹಾಗೂ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯ ವಸಂತನಗರದಲ್ಲಿರುವ ನ್ಯಾಷನಲ್ ಗ್ಯಾಲರಿ ಫಾರ್ ಮಾಡರ್ನ್ ಆರ್ಟ್‍ಗೆ ಬೆದರಿಕೆಯ ಇಮೇಲ್ ಬಂದಿದ್ದವು. ‘ಬಾಂಬ್ ಇರಿಸಲಾಗಿದ್ದು, ಇವುಗಳು ಶೀಘ್ರದಲ್ಲೇ ಸ್ಫೋಟಗೊಳ್ಳುವುದಾಗಿ ದುಷ್ಕರ್ಮಿಗಳು ಇಮೇಲ್ ರವಾನಿಸಿದ್ದರು.

ತಕ್ಷಣ ಆಯಾ ಠಾಣಾ ವ್ಯಾಪ್ತಿಯ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಹಾಯದಿಂದ ತಪಾಸಣೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ತಿಳಿದು ಬಂದಿತ್ತು. ಈ ಬಗ್ಗೆ ಸದ್ಯ ಕಬ್ಬನ್ ಪಾರ್ಕ್, ವಿಧಾನಸೌಧ ಹಾಗೂ ಹೈಗ್ರೌಂಡ್ಸ್ ಠಾಣೆಗಳಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಸಂದೇಶ ರವಾನೆಯಾಗಿರುವ ಇಮೇಲ್ ಐಡಿ ಬಳಕೆದಾರರ ಮಾಹಿತಿ ನೀಡುವಂತೆ ಸಂಬಂಧಪಟ್ಟ ಕಂಪೆನಿಗೆ ಕೋರಲಾಗಿದೆ ಎಂದು ಡಿಸಿಪಿ ಶೇಖರ್.ಎಚ್.ಟಿ.ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News