ಏಥರ್ ಕಂಪೆನಿ ರಾಜ್ಯ ತೊರೆಯಲು ಬೊಮ್ಮಾಯಿ ಸರಕಾರ ಕಾರಣ : ಸಚಿವ ಎಂ.ಬಿ.ಪಾಟೀಲ್

Update: 2024-06-27 15:30 GMT

 ಎಂ.ಬಿ.ಪಾಟೀಲ್/ ಬಸವರಾಜ ಬೊಮ್ಮಾಯಿ

ಬೆಂಗಳೂರು : ವಿದ್ಯುತ್ ಚಾಲಿತ ವಾಹನ ತಯಾರಿಕೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಏಥರ್ ಕಂಪೆನಿಯು ರಾಜ್ಯವನ್ನು ಬಿಟ್ಟು ಮಹಾರಾಷ್ಟ್ರಕ್ಕೆ ಸ್ಥಳಾಂತರಗೊಳ್ಳುವ ನಿರ್ಧಾರ ಮಾಡಿರುವುದಕ್ಕೆ ಹಿಂದಿನ ಬಿಜೆಪಿ ಸರಕಾರದ ವೈಫಲ್ಯವೇ ಮೂಲ ಕಾರಣ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

ಬಿಜೆಪಿ ಹಾಗೂ ಶಾಸಕ ಅರವಿಂದ ಬೆಲ್ಲದ್ ‘ರಾಜ್ಯ ಕಾಂಗ್ರೆಸ್ ಸರಕಾರದ ಬೇಜವಾಬ್ದಾರಿಯಿಂದಾಗಿ ಏಥರ್ ಕಂಪೆನಿ ರಾಜ್ಯದಿಂದ ಕಾಲ್ತೆಗೆದಿದೆ’ ಎಂದು ಮಾಡಿರುವ ಆರೋಪಕ್ಕೆ ಪತ್ರಿಕಾ ಹೇಳಿಕೆ ಮೂಲಕ ಅವರು ಪ್ರತಿಕ್ರಿಯಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಸರಕಾರವಿದ್ದಾಗ ಏಥರ್ ಕಂಪೆನಿಯು ತನ್ನ ಘಟಕ ಸ್ಥಾಪಿಸಲು 50 ಎಕರೆ ಜಮೀನು ಕೇಳಿತ್ತು. ಆದರೆ ಅವರ ಸರಕಾರವು ಕೇವಲ 35 ಎಕರೆ ಮಂಜೂರು ಮಾಡಿತು. ಇದರಲ್ಲೂ ಐದು ಎಕರೆ ವಿವಾದಕ್ಕೆ ಒಳಗಾಗಿತ್ತು. ಇದರಿಂದ ರೋಸಿ ಹೋದ ಕಂಪೆನಿಯು ಭೂಮಿಯನ್ನು ಸರಕಾರಕ್ಕೆ ವಾಪಸ್ ಒಪ್ಪಿಸಿತು. ಇದಾದ ಮೇಲೆ ಆ ಕಂಪೆನಿಯು ಬೇರೆಬೇರೆ ಕಾರಣಗಳಿಗೋಸ್ಕರ ರಾಜ್ಯವನ್ನು ಬಿಟ್ಟು ಮಹಾರಾಷ್ಟ್ರಕ್ಕೆ ತೆರಳಿ, ಅಲ್ಲಿ ಹೂಡಿಕೆ ಮಾಡುವ ತೀರ್ಮಾನ ಕೈಗೊಂಡಿತು ಎಂದು ಅವರು ವಿವರಿಸಿದ್ದಾರೆ.

ಹಿಂದಿನ ಬಿಜೆಪಿ ಸರಕಾರವು ಎಲ್ಲದರಲ್ಲೂ ವಿಫಲವಾಗಿತ್ತು. ಈಗ ಆ ಪಕ್ಷದ ನಾಯಕರು ಏಥರ್ ಕಂಪೆನಿಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಕಾಲದಲ್ಲಿ ಓಲಾ ಕಂಪೆನಿಯು ರಾಜ್ಯದಿಂದ ತಮಿಳುನಾಡಿಗೆ ಹೋಯಿತು. ಬೆಲ್ಲದ್ ಅವರು ಇದನ್ನು ನೆನಪು ಮಾಡಿಕೊಳ್ಳಬೇಕು ಎಂದು ಎಂ.ಬಿ.ಪಾಟೀಲ್ ಕುಟುಕಿದ್ದಾರೆ.

ಇಷ್ಟ ದರೂ ನಾವು ಏಥರ್ ಕಂಪೆನಿಗೆ ನಮ್ಮ ಸರಕಾರ ಬಂದ ಮೇಲೆ ಏಕಗವಾಕ್ಷಿ ಯೋಜನೆಯಡಿ ಹರಳೂರು-ಮುದ್ದೇನಹಳ್ಳಿ ನಡುವೆ 50 ಎಕರೆ ಜಮೀನು ಕೊಡುವುದಾಗಿ ಹೇಳಿದ್ದೆವು. ಆ ವೇಳೆಗಾಗಲೇ ಅವರು ಮಹಾರಾಷ್ಟ್ರಕ್ಕೆ ಹೋಗಿ ಆಗಿತ್ತು ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News