ಬಿಪಿಎಲ್ ಕಾರ್ಡ್ ರದ್ದತಿ ಆತಂಕದಲ್ಲಿ ಫಲಾನುಭವಿಗಳು
ಬೆಂಗಳೂರು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ವಯ ಕೇಂದ್ರ ಸರಕಾರವು ಆದ್ಯತಾ ಪಡಿತರ ಚೀಟಿ(ಬಿಪಿಎಲ್) ಹೊಂದಲು ನಿಗದಿಪಡಿಸಿರುವ ಮಾನದಂಡಗಳ ಪೈಕಿ ಕುಟುಂಬದ ವಾರ್ಷಿಕ ಆದಾಯವು 1.20ಲಕ್ಷ ರೂ.ಗಳ ಒಳಗೆ ಇರಬೇಕು ಎಂದು ಮಿತಿ ನಿಗದಿಪಡಿಸಿರುವುದು ರಾಜ್ಯದಲ್ಲಿರುವ ಬಿಪಿಎಲ್ ಕಾರ್ಡುದಾರರ ಮನದಲ್ಲಿ ಆತಂಕ ಮನೆ ಮಾಡುವಂತಾಗಿದೆ.
ಬಿಪಿಎಲ್ ಕಾರ್ಡುಗಳು ಕೇವಲ ಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆಯಲು ಅಷ್ಟೇ ಉಪಯೋಗಕ್ಕೆ ಬರುವುದಿಲ್ಲ. ಆರೋಗ್ಯ ಸಂಬಂಧಿ ಸೇವೆಗಳಿಗೂ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಪಿಎಲ್ ಕಾರ್ಡುಗಳಿಗೆ ಬೇಡಿಕೆ ಇದೆ. ಅಗತ್ಯ ವಸ್ತುಗಳ ಏರಿಕೆ ಗಗನಕ್ಕೇರಿದೆ. ಆದರೆ, ಅದಕ್ಕೆ ತಕ್ಕಂತೆ ಜನ ಸಾಮಾನ್ಯರ ಆದಾಯ ಮಾತ್ರ ಹೆಚ್ಚಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದ ವಾರ್ಷಿಕ ಆದಾಯ ಮಿತಿ 1.20ಲಕ್ಷ ರೂ.ಮೀರಬಾರದು ಎಂಬ ಮಾನದಂಡ ವಿಧಿಸಿರುವುದು ಅವೈಜ್ಞಾನಿಕ ಕ್ರಮ ಎಂದು ಸಾರ್ವಜನಿಕರು ಆಸಮಾಧಾನ ಹೊರಹಾಕಿದ್ದಾರೆ.
ಕುಟುಂಬದ ಉಪಯೋಗಕ್ಕಾಗಿ ಹಳೆಯ ಕಾರು ಇರಿಸಿಕೊಂಡಿದ್ದರೆ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹತೆ ಇರುವುದಿಲ್ಲ. ಆದರೆ, ಲಕ್ಷಾಂತರ ರೂ.ಬೆಲೆ ಬಾಳುವ ದ್ವಿಚಕ್ರ ವಾಹನ ಹೊಂದಿರುವವರಿಗೆ ಯಾವುದೇ ಸಮಸ್ಯೆ ಇಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರು ಸುಮಾರು 6 ಲಕ್ಷ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ, ಚಿಕ್ಕಮಗಳೂರು ತಾಲೂಕು ಒಂದರಲ್ಲೇ ಸುಮಾರು 5,100 ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲು ಪಟ್ಟಿ ಸಿದ್ಧಪಡಿಸಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲೂ ಸುಮಾರು 18 ಸಾವಿರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆಗೆ ವಾರ್ಷಿಕ 8ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. 2011ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆ 6.10 ಕೋಟಿ. ರಾಜ್ಯದಲ್ಲಿ ವಿತರಣೆಯಾಗಿರುವುದು 1.27 ಕೋಟಿ ಬಿಪಿಎಲ್ ಕಾರ್ಡುಗಳು. ಇವು 4.42 ಕೋಟಿ ಜನರನ್ನು ಒಳಗೊಳ್ಳುತ್ತವೆ. ಈ ಅಂಕಿ ಅಂಶ ರಾಜ್ಯದಲ್ಲಿ ಶೇ.72ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂಬುದನ್ನು ಬಿಂಬಿಸುತ್ತದೆ. ಆದರೆ, ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಶೇ.13.16ರಷ್ಟು ಜನ ಮಾತ್ರ ಬಡತನ ರೇಖೆಗಿಂತ ಕೆಳಗಿದ್ದಾರೆ.
ಅಧಾರ್ ಹಾಗೂ ಪಾನ್ ಕಾರ್ಡ್ ಅನ್ನು ನಿಗದಿತ ಅವಧಿ ಮೀರಿದ ಬಳಿಕ 1 ಸಾವಿರ ರೂ.ದಂಡ ಪಾವತಿಯೊಂದಿಗೆ ಜೋಡಣೆ ಮಾಡಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಂಡ ಪಾವತಿಯ ಕಾರಣದಿಂದಾಗಿ ಬಿಪಿಎಲ್ ಕಾರ್ಡುದಾರರು ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಭಾರತದಲ್ಲಿನ ಬಡತನ ಪ್ರಮಾಣದ ಸರಾಸರಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬಡತನದ ಪ್ರಮಾಣ ಕಡಿಮೆ ಇರಬೇಕು. ವಿಶ್ವಬ್ಯಾಂಕ್ ಸಿದ್ಧಪಡಿಸುವಂತಹ ಜಾಗತಿಕ ಬಡತನ ಸೂಚ್ಯಂಕದ ಪ್ರಕಾರ ಭಾರತದಲ್ಲಿ ಶೇ.10ರಷ್ಟು ಬಡತನ ಇದೆ. ನೀತಿ ಆಯೋಗದ ಅಂಕಿ ಅಂಶಗಳ ಪ್ರಕಾರ ಈ ಪ್ರಮಾಣವು ಶೇ.11.28ರಷ್ಟು ಇದೆ. ಹೀಗಿರುವಾಗ ಕರ್ನಾಟಕದಲ್ಲಿ ಬಡತನದ ಪ್ರಮಾಣ ಇನ್ನೂ ಕಡಿಮೆ ಇರಬೇಕು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ರಾಜಕಾರಣಿಗಳು ಚುನಾವಣೆ ಸೇರಿದಂತೆ ಇನ್ನಿತರ ಸಂದರ್ಭದಲ್ಲಿ ತಮ್ಮ ಪರವಾಗಿರುವವರಿಗೆ ಸೌಲಭ್ಯ ಕಲ್ಪಿಸಲು ಅನರ್ಹರಿಗೂ ಬಿಪಿಎಲ್ ಕಾರ್ಡುಗಳನ್ನು ಮಾಡಿಸಿಕೊಡುವುದರಿಂದ ಇಂದು ರಾಜ್ಯದಲ್ಲಿ ಬಿಪಿಎಲ್ ಕಾರ್ಡುಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ನಾವು ಯಾವುದೇ ಕಾರ್ಡುಗಳನ್ನು ರದ್ದು ಮಾಡುವುದಿಲ್ಲ. ಬದಲಾಗಿ ಸರಕಾರ ನಿಗದಿ ಮಾಡಿರುವ ಮಾನದಂಡಗಳ ಪ್ರಕಾರ ಇಲ್ಲದೆ ಇರುವ ಕಾರ್ಡುಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆ ಮಾಡುತ್ತೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಿಪಿಎಲ್ ಕಾರ್ಡ್ ಪಡೆಯಲು ಯಾರು ಅನರ್ಹ!: ಸರಕಾರದ ಅಥವಾ ಸರಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು, ಸರಕಾರಿ ಪ್ರಾಯೋಜಿತ, ಸರಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆ ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು.
ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ಅದಕ್ಕೆ ಸಮನಾದ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು, ನಗರ ಪ್ರದೇಶಗಳಲ್ಲಿ 1,000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನ ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲ ಕುಟುಂಬಗಳು ಹಾಗೂ ವಾರ್ಷಿಕ ಆದಾಯವೂ 1.20ಲಕ್ಷ ರೂ.ಗಳಿಗಿಂತಲೂ ಹೆಚ್ಚಿರುವ ಕುಟುಂಬಗಳು ಬಿಪಿಎಲ್ ಕಾರ್ಡು ಪಡೆಯಲು ಅರ್ಹರಿರುವುದಿಲ್ಲ ಎಂದು ಸರಕಾರ ಮಾನದಂಡ ನಿಗದಿಪಡಿಸಿದೆ.
ಸರಕಾರ ಬಿಪಿಎಲ್ ಕಾರ್ಡು ಹೊಂದಲೂ ವಾರ್ಷಿಕ ಆದಾಯ ಮಿತಿ 1.20 ಲಕ್ಷ ರೂ.ನಿಗದಿ ಮಾಡಿರುವುದೇ ಅವೈಜ್ಞಾನಿಕ. ಕಾರ್ಮಿಕರು ಕನಿಷ್ಠ ಕೂಲಿ ಮಾಸಿಕ 18ಸಾವಿರ ರೂ.ಕೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಒಂದು ಚಿಕ್ಕ ಮನೆಗೆ ಕನಿಷ್ಠ 6ಸಾವಿರ ರೂ.ಬಾಡಿಗೆ ಇದೆ. ಇಂತಹ ಸ್ಥಿತಿಯಲ್ಲಿ ಬಡವರು ತಮ್ಮ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೌಲಭ್ಯ ಹೇಗೆ ಕೊಡಲು ಸಾಧ್ಯ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಕಡಿಮೆ ಆಗುತ್ತಿದೆ. ಇದರಿಂದ, ಮಕ್ಕಳಲ್ಲಿ, ಮಹಿಳೆಯರಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚುತ್ತಿದೆ. ಇದನ್ನೆಲ್ಲ ತಡೆಗಟ್ಟಬೇಕು ಎಂದರೆ ಕೇಂದ್ರ ಹಾಗೂ ರಾಜ್ಯ ಸರಕಾರ ಪಡಿತರ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸಬೇಕು.
ಎಪಿಎಲ್, ಬಿಪಿಎಲ್ ಎಂಬ ತಾರತಮ್ಯವನ್ನೇ ತೆಗೆದು ಹಾಕಬೇಕು. ಕೇರಳ ರಾಜ್ಯದಲ್ಲಿ ಒಂದು ಕುಟುಂಬಕ್ಕೆ ಅಗತ್ಯವಿರುವ 18 ಬಗೆಯ ದಿನ ಬಳಕೆ ವಸ್ತುಗಳನ್ನು ಪಡಿತರ ವ್ಯವಸ್ಥೆ ಮೂಲಕ ನೀಡಲಾಗುತ್ತಿದೆ. ಈಗ ಸರಕಾರ ಕೊಡುತ್ತಿರುವ ತಲಾ ಐದು ಕೆಜಿ ಅಕ್ಕಿಯಲ್ಲಿ ಒಬ್ಬ ಮನುಷ್ಯ ಬದಕಲು ಸಾಧ್ಯವೇ? ಹಸಿವಿನಿಂದ ಸಾಯುವ ಜನರು ಇನ್ನೂ ಇದ್ದಾರೆ. ವಯೋವೃದ್ಧರು ಬಯೋಮೆಟ್ರಿಕ್ ಕೊಡಲು ಸಾಧ್ಯವಾಗುವುದಿಲ್ಲ. ಅವರ ಕೈ ಬೆರಳುಗಳಲ್ಲಿನ ರೇಖೆಗಳು ಸವೆದು ಹೋಗಿರುತ್ತವೆ. ಅದರಿಂದಾಗಿ, ಪಡಿತರ ಪಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ. ವಿಧವೆಯರಿಗೆ ಅಂತ್ಯೋದಯ ಕಾರ್ಡುಗಳನ್ನು ನೀಡಬೇಕು. ಅದನ್ನು ನೀಡುತ್ತಿಲ್ಲ. ಪಡಿತರ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸುವ ಬದಲು, ಅವೈಜ್ಞಾನಿಕ ಮಾನದಂಡಗಳನ್ನು ವಿಧಿಸಿ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುವುದು ಸರಿಯಲ್ಲ.
ಗೌರಮ್ಮ, ರಾಜ್ಯ ಉಪಾಧ್ಯಕ್ಷೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ
ರಾಜ್ಯ ಸರಕಾರದ ಅಂಕಿ-ಅಂಶ ನೋಡಿದರೆ ಶೇ.72ರಷ್ಟು ಮಂದಿ ಬಳಿ ಬಿಪಿಎಲ್ ಕಾರ್ಡು ಇರುವುದಾಗಿ ಸೂಚಿಸುತ್ತದೆ. ಹೀಗಿರುವಾಗ ಯಾವುದೇ ಅಭಿವೃದ್ಧಿ ಕಾರ್ಯಗಳು, ಬಡತನ ಹೋಗಲಾಡಿಸುವ ಕಾರ್ಯಗಳು ಯಶಸ್ವಿಯಾಗುವುದಿಲ್ಲ. ನಿಜವಾಗಿಯೂ ಯಾರು ಬಡತನದಲ್ಲಿದ್ದಾರೆ ಅವರಿಗೆ ಸೌಲಭ್ಯ ಸಿಗಬೇಕು. ಹಳ್ಳಿ, ನಗರ ಪ್ರದೇಶಗಳಲ್ಲಿ ರಾಜಕೀಯ ನಾಯಕರು ಸಿಕ್ಕಸಿಕ್ಕವರಿಗೆಲ್ಲ ಬಿಪಿಎಲ್ ಕಾರ್ಡು, ಪಿಂಚಣಿ ಸೌಲಭ್ಯ ಮಾಡಿಸಿಕೊಡುವ ಬದಲಾಗಿ, ವೈಜ್ಞಾನಿಕವಾಗಿ ಬಿಪಿಎಲ್ ಕಾರ್ಡುಗಳ ಹಂಚಿಕೆಯಾದರೆ ಬಡತನದ ವಿರುದ್ಧ ಹೋರಾಟದಲ್ಲಿ ಗೆಲುವು ಸಿಗುತ್ತದೆ. ಕೇಂದ್ರ ಸರಕಾರವು ಈ ಬಾರಿ ಬಡತನ ಪ್ರಮಾಣವನ್ನು ಶೇ.10ಕ್ಕಿಂತ ಕೆಳಗೆ ಇಳಿಸುವ ಗುರಿ ಹೊಂದಿದೆ. ಭಾರತದ ತಲಾ ಆದಾಯದ ರಾಷ್ಟ್ರೀಯ ಸರಾಸರಿ 2.20ಲಕ್ಷ ರೂ.ಇದ್ದರೆ, ಕರ್ನಾಟಕದ ತಲಾ ಆದಾಯದ ಸರಾಸರಿ 3.32ಲಕ್ಷ ರೂ.ಇದೆ. ಯಾವುದೇ ಆರ್ಥಿಕ ಮಾನದಂಡಗಳನ್ನು ಬಳಸಿಕೊಂಡರೂ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಉತ್ತಮ ಆರ್ಥಿಕ ಪರಿಸ್ಥಿತಿಯನ್ನು ಹೊಂದಿದೆ. ಸರಕಾರ ಅನರ್ಹ ಬಿಪಿಎಲ್ ಕಾರ್ಡು ಗಳಿಗೆ ಕಡಿವಾಣ ಹಾಕಿದ್ದಲ್ಲಿ, ಕೆಲವೇ ವರ್ಷಗಳಲ್ಲಿ ಗರಿಷ್ಠ ಮಟ್ಟದಲ್ಲಿ ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆ ತರಲು ಸಾಧ್ಯ
<ಪ್ರೊ.ಎಸ್.ಆರ್.ಕೇಶವ, ಮುಖ್ಯಸ್ಥರು,
ಆರ್ಥಿಕ ವಿಭಾಗ, ಬೆಂಗಳೂರು ವಿವಿ