ಸರಕಾರಕ್ಕೆ ಒಳ್ಳೆಯ ಹೆಸರು ತನ್ನಿ,‌‌ ಇಲ್ಲದಿದ್ದರೆ ಬೇರೆ ಜಾಗ ನೋಡಿಕೊಳ್ಳಿ: ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ

Update: 2023-09-25 11:38 GMT

ಬೆಂಗಳೂರು: ಸರಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡಬೇಕು, ಇಲ್ಲದಿದ್ದರೆ ಬೇರೆ ಜಾಗ ನೋಡಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಬನಶಂಕರಿಯ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ 2023-24 ಮೊದಲ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು,  ʼʼಪ್ರತಿ ಹಳ್ಳಿ, ಪ್ರತಿ ಪಂಚಾಯಿತಿಯಲ್ಲೂ ಕುಡಿಯುವ ನೀರಿನ ಸ್ಥಿತಿಗತಿ ಅರಿತು ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಬೇಕು.ಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಇದರ ನಿವಾರಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನೀರಿಗಾಗಿ ನಾವು ಬಡಿದಾಡುತ್ತಾ ಇದ್ದೇವೆ. ಆದರೆ ನಿಮ್ಮ ಬಳಿ ಮಾಹಿತಿಯೇ ಇಲ್ಲʼʼ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ʼʼಎಷ್ಟು ಶುದ್ಧ ನೀರು ಪೂರೈಕೆ ಘಟಕಗಳು (RO) ಗಳು ಇವೆ. ನಿತ್ಯ ಎಷ್ಟು ನೀರು ಪೂರೈಕೆ ಆಗುತ್ತಿದೆ. ಎಷ್ಟು ಜನ ಬಳಸುತ್ತಿದ್ದಾರೆ ಎಂಬ ವಿವರವೇ ನಿಮ್ಮ ಬಳಿ ಇಲ್ಲ. ಸಭೆಗೆ ಬರುವ ಮುನ್ನ ಸಿದ್ಧತೆಯನ್ನೇ ಮಾಡಿಕೊಂಡು ಬಂದಿಲ್ಲ. ಸಭೆಯ ಗಂಭೀರತೆಯೇ ನಿಮಗೆ ಅರ್ಥವಾಗಿಲ್ಲʼʼ ಎಂದು ತರಾಟೆಗೆ ತೆಗೆದುಕೊಂಡರು. 

"ಪ್ರತಿ ಕಚೇರಿಯಲ್ಲಿ ಏನು ಕೆಲಸ ನಡೆಯುತ್ತದೆ ಎನ್ನುವ ವರದಿ ಪಡೆದುಕೊಳ್ಳುವ ವ್ಯವಸ್ಥೆ ನನ್ನ ಬಳಿ ಇದೆ. ನಾನು ಅದನ್ನು ಬಿಚ್ಚಿ ನಿಮ್ಮ ಮರ್ಯಾದೆ ತೆಗೆದರೆ, ಮಾಧ್ಯಮದವರು ನಿಮ್ಮ ಜನ್ಮ ಜಾಲಾಡಿ ಬಿಡುತ್ತಾರೆ. ಆದರೆ ಆ ಕೆಲಸವನ್ನು ನಾನು ಮಾಡುವುದಿಲ್ಲ" ಎಂದು ಹೇಳಿದರು. 

ʼʼಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳ ಸಾವು-ನೋವು, ಡೆಂಗ್ಯೂ ಜ್ವರ, ಮಳೆ ಕೊರತೆ, ಬರ, ಕುಡಿಯುವ ನೀರು ಮತ್ತಿತರ ವಿಚಾರಗಳ ಬಗ್ಗೆ ಒಬ್ಬರೂ ವರದಿ ಕೊಟ್ಟಿಲ್ಲ. ನಿಮ್ಮದೇ ಲೋಕದಲ್ಲಿ ವಿಹರಿಸುತಿದ್ದೀರಿ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಮುಖ ಆಗುಹೋಗುಗಳ ಬಗ್ಗೆ ವರದಿ ಕೊಡಬೇಕೆಂಬ ಕನಿಷ್ಟ ಸೌಜನ್ಯ ನಿಮಗೆ ಇಲ್ಲವೇ?ʼʼ ಎಂದು ಪ್ರಶ್ನೆ ಮಾಡಿದರು. 

ʼʼಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರ ಕೆಲಸಗಳನ್ನು ಸಮಾನವಾಗಿ ಮಾಡಿ. ಜನರು ಸರ್ಕಾರಿ ಕಚೇರಿಗಳಿಗೆ ತಮ್ಮ ಕಷ್ಟಗಳನ್ನು ಬಗೆಹರಿಸಿಕೊಳ್ಳಲು ಬರುತ್ತಾರೆ. ಅವರ ಕೆಲಸಗಳನ್ನು ವಿಳಂಬವಿಲ್ಲದೆ ಸೂಕ್ತ ಕಾಲದಲ್ಲಿ ಮಾಡಿಕೊಡಬೇಕುʼʼ ಎಂದು ಸೂಚನೆ ನೀಡಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News