ರಾಜ್ಯದ ಕಾನೂನು ಸುವ್ಯವಸ್ಥೆ ಕುಸಿತದ ಕುರಿತು ಇಡೀ ದೇಶದಲ್ಲಿ ಚರ್ಚೆ ಆಗಿದೆ : ಬಿ.ವೈ.ವಿಜಯೇಂದ್ರ

Update: 2024-05-28 11:20 GMT

ಬೆಂಗಳೂರು : ರಾಜ್ಯದ ಕಾನೂನು ಸುವ್ಯವಸ್ಥೆ ಕುಸಿತದ ಕುರಿತು ಇಡೀ ದೇಶದಲ್ಲಿ ಚರ್ಚೆ ಆಗಿದೆ. ಎಲ್ಲಿ ನೋಡಿದರೂ ಕೊಲೆಗಳು ನಡೆಯುತ್ತಿವೆ. ಚನ್ನಗಿರಿಯಲ್ಲಿ ಪೊಲೀಸರಿಗೇ ಪೊಲೀಸರು ರಕ್ಷಣೆ ಕೊಡಬೇಕಾದ ಸಂದರ್ಭ ಸೃಷ್ಟಿ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, "ರಾಜ್ಯಾದ್ಯಂತ ಮಟ್ಕಾ ದಂಧೆ ಯಥೇಚ್ಛವಾಗಿ ನಡೆದಿದೆ. ಕಾನೂನುಬಾಹಿರ ದುಷ್ಕೃತ್ಯಗಳು ಯಾರ ಭಯವೂ ಇಲ್ಲದೇ ನಡೆಯುತ್ತಿವೆ" ಎಂದು ತಿಳಿಸಿದರು.

ʼರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ. ಒಂದು ವರ್ಷದ ಅವಧಿಯಲ್ಲಿ ಈ ಸರಕಾರದ ಸಾಧನೆ ಶೂನ್ಯ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಮಾನ್ಯ ಮುಖ್ಯಮಂತ್ರಿಗಳು, ಯಾರೇ ಒಬ್ಬ ಸಚಿವರು ಒಂದೇ ಒಂದು ಗುದ್ದಲಿಪೂಜೆ ಮಾಡಿಲ್ಲ; ಒಂದೇ ಒಂದು ಶಂಕುಸ್ಥಾಪನೆ ಆಗಿಲ್ಲ. ಹೊಸ ಯೋಜನೆಗಳನ್ನು ಘೋಷಿಸಿಲ್ಲʼ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಶಿಕ್ಷಣ ಸಚಿವರ ಹೇರ್ ಕಟಿಂಗ್‍ಗೆ ಹಣ ಸಂಗ್ರಹ :

ಲೋಕಸಭಾ ಚುನಾವಣೆ ಸಂಬಂಧ ದೊಡ್ಡ ನಿರಾಸೆ ಕಾಂಗ್ರೆಸ್ಸಿಗರಿಗೆ ಕಾದಿದೆ . ಶಿಕ್ಷಣ ಸಚಿವರಿಗೆ ಹಣಕಾಸಿನ ಸಮಸ್ಯೆ ಇದ್ದರೆ ಅವರ ಹೇರ್ ಕಟಿಂಗ್‍ಗೆ ಹಣ ಸಂಗ್ರಹಿಸಿ ಕೊಡಲು ಯುವ ಮೋರ್ಚಾದವರಿಗೆ ಹೇಳುವೆ ಎಂದು ವಿಜಯೇಂದ್ರ ಅವರು ತಿಳಿಸಿದರು.

ಒಬ್ಬರು ಶಿಕ್ಷಣ ಸಚಿವರು ಹೇಗಿರಬೇಕು?. ಅವರು ಮಾದರಿ ಆಗಿರಬೇಕು. ನಮ್ಮ ಶಿಕ್ಷಣ ಸಚಿವರು ಒಂದು ಕಡೆ ನನಗೆ ಕನ್ನಡ ಬರುವುದಿಲ್ಲ ಎನ್ನುತ್ತಾರೆ. ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ಶಿಕ್ಷಕರ ನೇಮಕಕ್ಕೆ ಖಾಸಗಿ ಕಾರ್ಮಿಕರನ್ನು ಗುತ್ತಿಗೆ ಮಾಡಿಕೊಳ್ಳುವವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಶಿಕ್ಷಣ ಸಚಿವರು ಎಷ್ಟು ಗಂಭೀರವಾಗಿ ಇಲಾಖೆಯನ್ನು ಪರಿಗಣಿಸಿದ್ದಾರೆಂದು ಗೊತ್ತಾಗುತ್ತದೆ ಎಂದು ಟೀಕಿಸಿದರು.

ಭ್ರಷ್ಟಾಚಾರದ ಪಿತಾಮಹರೆಂದು ರುಜುವಾತು:

ಎಸ್‍ಟಿ ಅಭಿವೃದ್ಧಿ ನಿಗಮದ 187 ಕೋಟಿಗೂ ಹೆಚ್ಚು ಮೊತ್ತದ ಹಗರಣ ನಿನ್ನೆ ನಡೆದಿದೆ. ಇಲಾಖೆ ಅಕೌಂಟೆಂಟ್ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಸಿಎಂ, ಡಿಸಿಎಂ ಕಳಕಳಿ, ಪ್ರಾಮಾಣಿಕತೆ ಎಲ್ಲಿ ಹೋಗಿದೆ?. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಮ್ಮ ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿ, ಒಂದು ಸುಳ್ಳನ್ನು ನೂರು ಬಾರಿ ಹೇಳಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಪಿತಾಮಹರೆಂದು ರುಜುವಾತಾಗಿದೆ ಎಂದು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News