ಹೊಸ ಪ್ರವಾಸೋದ್ಯಮ ನೀತಿಗೆ ಸಂಪುಟದ ಅನುಮೋದನೆ : ಸಚಿವ ಎಚ್.ಕೆ.ಪಾಟೀಲ್

Update: 2024-10-28 16:11 GMT

ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ನೀತಿ 2024-29ನ್ನು ರಾಜ್ಯ ಸಚಿವ ಸಂಪುಟ ಅಂಗೀಕರಿಸಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಪ್ರವಾಸೋದ್ಯಮದ ಹೊಸ ನೀತಿಯು ಪ್ರವಾಸೋದ್ಯಮ ಕ್ಷೇತ್ರವನ್ನು ಅತ್ಯಂತ ಆದ್ಯತೆಯ ಉತ್ಸಾಹದಾಯಕ ಮತ್ತು ಪುಷ್ಟಿಕರಿಸಿದ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದರು.

ಸಮಾಜದ ಎಲ್ಲ ಸ್ಥರಗಳ ಬಡ, ಮಧ್ಯಮ ವರ್ಗದ ಮತ್ತು ಮೇಲ್ಮಧ್ಯಮ ವರ್ಗದ ಹಾಗೂ ಗಣ್ಯ ವರ್ಗದ ಪ್ರವಾಸಿ ಅವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು ಹೊಸ ನೀತಿಯನ್ನು ರಚಿಸಲಾಗಿದೆ. ಶಾಲಾ-ಬಾಲಕರ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ, ಕೃಷಿ ಪ್ರವಾಸ, ಆರೋಗ್ಯ ಕ್ಷೇತ್ರದ ಹೊಸ ಅನುಭವಗಳ ಪ್ರವಾಸೋದ್ಯಮ, ಆಧ್ಯಾತ್ಮಿಕ, ಯಾತ್ರಾತೀರ್ಥಗಳ ಪ್ರವಾಸ, ಪಾರಂಪರಿಕ ತಾಣಗಳ ಭೇಟಿ ಅಧ್ಯಯನ ಪ್ರವಾಸ, ಸಾಹಸ ಪ್ರವಾಸೋದ್ಯಮದ ಜೊತೆಗೆ ವಿರಾಮ, ವಿನೋದ, ಜ್ಞಾನಾರ್ಜನೆ, ಮನಃಶಾಂತಿ, ವಿಶ್ರಾಂತಿ ಮುಂತಾದವುಗಳಿಗಾಗಿ ಸಮಗ್ರವಾದ ನೀತಿಯೊಂದನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.

ಈ ನೀತಿಯು ಕರ್ನಾಟಕದಲ್ಲಿ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುತ್ತಿದೆ. ಉತ್ತಮ ಗುಣಮಟ್ಟದ ಪ್ರವಾಸಿ ಸೌಕರ್ಯಗಳನ್ನು ಕಲ್ಪಿಸಲು ಕ್ರಮವಹಿಸುತ್ತದೆ. ಆಕರ್ಷಣಿಯ ಮತ್ತು ವಿಹಾರದಾಯಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಪ್ರವಾಸೋದ್ಯಮ ವಲಯದಲ್ಲಿ ಸಾರ್ವಜನಿಕ ಖಾಸಗಿ ಭಾಗವಹಿಸುವಿಕೆಯನ್ನು ಉತ್ತೇಜಿಸಲಾಗುವುದು. ಅದಕ್ಕಾಗಿ ಕರ್ನಾಟಕವನ್ನು ಆದ್ಯತೆಯ ತಾಣವನ್ನಾಗಿ ಪರಿವರ್ತಿಸಲು ಹೂಡಿಕೆ ಸ್ನೇಹಿ ನೀತಿಗಳೊಂದಿಗೆ ಅನುಕೂಲಕರ ವಾಣಿಜ್ಯ ವಾತಾವರಣವನ್ನು ಉತ್ತೇಜಿಸಲಾಗುವುದು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡಲಾಗುವುದು. 9 ಪ್ರಮುಖ ಕೇಂದ್ರೀಕೃತ ಕ್ಷೇತ್ರಗಳನ್ನು ಗುರುತಿಸಿದೆ. ಪ್ರವಾಸೋದ್ಯಮ ಅನುಭವಗಳ ಅಭಿವೃದ್ಧಿಗಾಗಿ 25 ವಿಷಯಾಧಾರಿತ ಕ್ಷೇತ್ರಗಳನ್ನು ಅರ್ಹ ಪ್ರವಾಸೋದ್ಯಮ ಯೋಜನೆಯಡಿ 44 ವಿವಿಧ ರೀತಿಯ ಪ್ರವಾಸೋದ್ಯಮ ಯೋಜನೆಗಳನ್ನು ಗುರುತಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. 30 ಸಾವಿರ ಜನರಿಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಉದ್ಯೋಗಾವಕಾಶ ಒದಗಿಸಲಾಗುವುದು ಎಂದು ಅವರು ಹೇಳಿದರು.

1500 ಕೋಟಿ ರೂ.ಹೂಡಿಕೆ ಯೋಜಿಸಿದೆ. ಆತೀಥೆಯ ಉದ್ಯಮ ಉತ್ತೇಜನಕ್ಕೆ ಶೇ.5 ರಷ್ಟು ಬಂಡವಾಳ ಹೂಡಿಕೆಗೆ ಸಹಾಯಧನವನ್ನು ಹೆಚ್ಚುವರಿಯಾಗಿ ಒದಗಿಸಲಾಗುವುದು. 9 ಪ್ರೋತ್ಸಾಹಕಗಳನ್ನು, ಎರಡು ರೀತಿಯ ಸಹಾಯಧನಗಳನ್ನು, 7 ಬಗೆಯ ರಿಯಾಯಿತಿಗಳನ್ನು ಪ್ರಕಟಿಸಲಾಗಿದೆ. ಈ ನೀತಿಯು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು, ವಿದೇಶಿ ವಿನಿಮಯ ಗಳಿಕೆಯನ್ನು ಹೆಚ್ಚಿಸಲು, ಉದ್ಯೋಗವನ್ನು ಸೃಷ್ಟಿಸಲು, ಕರ್ನಾಟಕದ ಜನರಿಗೆ ಸಾಮಾಜಿಕ-ಆರ್ಥಿಕ ಉನ್ನತಿಯನ್ನು ಸುಗಮಗೊಳಿಸಲು ಮತ್ತು ರಾಜ್ಯದ ಜಿ.ಎಸ್.ಡಿ.ಪಿ ಗೆ ಪ್ರವಾಸೋದ್ಯಮ ಕ್ಷೇತ್ರದ ಕೊಡುಗೆಯನ್ನು ಹೆಚ್ಚಿಸಲು ಮೂಲಭೂತ ಬಲವಾದ ಅಡಿಪಾಯವನ್ನು ಒದಗಿಸುತ್ತದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ನಿಗದಿಪಡಿಸಿರುವ ಗುರಿಗಳು:

ದೇಶಿಯ ಪ್ರವಾಸಿಗರ ಭೇಟಿಯಲ್ಲಿ ದೇಶದಲ್ಲಿಯೇ ಪ್ರಥಮ 3 ರಾಜ್ಯಗಳಲ್ಲಿ ಒಂದಾಗುವುದು, ವಿದೇಶಿ ಪ್ರವಾಸಿಗರ ಭೇಟಿಯಲ್ಲಿ ದೇಶದಲ್ಲಿಯೇ ಪ್ರಥಮ 5 ರಾಜ್ಯಗಳಲ್ಲಿ ಒಂದಾಗುವುದು, ಕನಿಷ್ಟ 47 ಸಾವಿರ ಜನರಿಗೆ ನೇರ ಉದ್ಯೋಗವನ್ನು ಸೃಜಿಸುವುದು, ಒಂದು ಲಕ್ಷ ಜನರಿಗೆ ಪರೋಕ್ಷ ಮತ್ತು ಪ್ರೇರಿತ ಉದ್ಯೋಗವನ್ನು ಸೃಷ್ಟಿಸುವುದು, 7,800 ಕೋಟಿ ರೂ.ಹೂಡಿಕೆಯನ್ನು ಆಕರ್ಷಿಸುವುದು, ರಾಜ್ಯಾದ್ಯಂತ ಇಲಾಖೆಯ ಮಾಲಕತ್ವದಲ್ಲಿರುವ 680 ಎಕರೆ ಭೂಮಿಯನ್ನು ಪ್ರವಾಸೋದ್ಯಮ ಯೋಜನೆಗಳಿಗಾಗಿ ನಿರ್ವಹಣೆ ಮಾಡುವುದು.

ಒಂದು ಜಿಲ್ಲೆ ಒಂದು ತಾಣ ಯೋಜನೆಯಡಿ ಪ್ರತಿ ಜಿಲ್ಲೆಗೆ ಒಂದರಂತೆ ಕನಿಷ್ಟ 30 ಪ್ರಮುಖ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದು. ಕರ್ನಾಟಕವನ್ನು ಕನಿಷ್ಠ 50 ಅಂತಾರಾಷ್ಟ್ರೀಯ ಪ್ರವಾಸಿ ಮೇಳಗಳಲ್ಲಿ ಪ್ರಚಾರಪಡಿಸುವುದು ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.

ಸಾಹಸ, ಕೃಷಿ, ಕಾರವಾನ್, ಕರಾವಳಿ, ಪಾಕಪದ್ಧತಿ, ಸಾಂಸ್ಕೃತಿಕ, ಪಾರಂಪರಿಕ, ಪರಿಸರ, ಶೈಕ್ಷಣಿಕ, ಚಲನಚಿತ್ರ, ಗಾಲ್ಫ್, ಒಳನಾಡಿನ ಜಲ, ಸಾಹಿತ್ಯ, ಕಡಲ, ವೈದ್ಯಕೀಯ, ಗಣಿಗಾರಿಕೆ, ಗ್ರಾಮೀಣ, ಆಧ್ಯಾತ್ಮಿಕ, ಕ್ರೀಡಾ, ಬುಡಕಟ್ಟು, ವಿವಾಹ, ವಾರಾಂತ್ಯದ ಹಾಗೂ ಸ್ವಾಸ್ಥ್ಯ ಎಂಬ ಅರ್ಹ ಪ್ರವಾಸೋದ್ಯಮ ಯೋಜನೆಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News