ರಾಮನಗರಕ್ಕೆ ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ

Update: 2024-07-26 13:56 GMT

ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರನ್ನು ‘ಬೆಂಗಳೂರು ದಕ್ಷಿಣ’ ಜಿಲ್ಲೆಯೆಂದು ಮರು ನಾಮಕರಣ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ರ್ಯಾಂಡ್ ಬೆಂಗಳೂರು ಮೂಲಕ ಸೇರ್ಪಡೆ (ಇನ್‍ಕ್ಲೂಸಿವ್ ಗ್ರೋಥ್) ಅಭಿವೃದ್ಧಿಯ ಕಲ್ಪನೆಗಳನ್ನು ಸಾಕಾರಗೊಳಿಸುವ ಸದುದ್ದೇಶದಿಂದ ಈ ಹೊಸ ನಾಮಕರಣ ಮಾಡಲು ರಾಜ್ಯ ಸರಕಾರ ಮುಂದಾಗಿದೆ ಎಂದು ತಿಳಿಸಿದರು.

ಸಚಿವ ಸಂಪುಟದ ಇತರ ನಿರ್ಣಯಗಳು: 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲ ಅಭ್ಯರ್ಥಿಗಳಿಗೆ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಒಂದು ಬಾರಿಗೆ ವಯೋಮಿತಿಯ ನಿರ್ಬಂಧವನ್ನು ಸಡಿಲಿಸಿ ಹೆಚ್ಚುವರಿ ವಿಶೇಷ ಅವಕಾಶವನ್ನು ನೀಡುವ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಸ್ತಾಪಿಸಿತ್ತು. ಅದಕ್ಕೆ ಕಳೆದ ಜೂ.21ರಂದು ಹೊರಡಿಸಿದ್ದ ಸರಕಾರಿ ಆದೇಶಕ್ಕೆ ಸಚಿವ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ. 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಹುದ್ದೆಯ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ ಎಲ್ಲ ಅಭ್ಯರ್ಥಿಗಳಿಗೆ ಇದು ಅನ್ವಯವಾಗುತ್ತದೆ ಎಂದು ಅವರು ತಿಳಿಸಿದರು.

ಲೋಕ ಶಿಕ್ಷಣ ಟ್ರಸ್ಟ್ ಧಾರವಾಡದ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪಿಸಲು 2.64 ಎಕರೆ ಜಮೀನನ್ನು ಹಂಚಿಕೆ ಮಾಡಲು ಕೈಗಾರಿಕಾ ಇಲಾಖೆ ಪ್ರಸ್ತಾಪಿಸಿತ್ತು. ಪ್ರಸ್ತಾಪಕ್ಕೆ ಸಚಿವ ಸಂಪುಟ ಅನುಮೋದಿಸಿದೆ. ಗಾಮನಗಟ್ಟಿ ಕೈಗಾರಿಕಾ ಪ್ರದೇಶದ ಸಿ.ಎ ನಿವೇಶನ ಸಂಖ್ಯೆ: 1 ರಲ್ಲಿ 2.64 ಎಕರೆ ಜಮೀನನ್ನು ಪ್ರಸ್ತುತವಿರುವ ಹಂಚಿಕೆ ದರದ ಮೇಲೆ ಶೇ.75 ರಷ್ಟು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲು ಹಾಗೂ ವಿಸ್ತರಿಸುವ ರಿಯಾಯಿತಿ ಮೊತ್ತವನ್ನು ಸರಕಾರದಿಂದ ಕೆಐಎಡಿಬಿಗೆ ಮರುಪಾವತಿ ಮಾಡಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಅವರು ವಿವರಿಸಿದರು.

ಬೆಂಗಳೂರು ಆಧಾರಿತ ಅನಿಮೇಶನ್ ಇಂಡಸ್ಟ್ರಿ ಸಂಘಟನೆಯು ಅನಿಮೇಶನ್, ವಿಎಫ್‍ಎಕ್ಸ್ ಮತ್ತು ಗೇಮಿಂಗ್ ಉದ್ಯಮವನ್ನು ಅಭಿವೃದ್ಧಿಪಡಿಸಲು ಬದ್ಧವಾಗಿದೆ. ಇದು ಉದ್ಯಮ, ಶೈಕ್ಷಣಿಕ ಸಂಸ್ಥೆಗಳು, ಸರಕಾರ ಮತ್ತು ಎವಿಜಿಸಿ(ಅನಿಮೇಷನ್, ವಿಶುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್) ಸಮುದಾಯದ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಉತ್ತೇಜಕವಾಗಿ ಕಾರ್ಯನಿರ್ವಹಿಸುವ ಉದ್ದೇಶ ಹೊಂದಿದೆ. ಒಟ್ಟು 16 ಕೋಟಿ ರೂ.ಗಳ ವೆಚ್ಚದಲ್ಲಿ ಈ ಉತ್ಕೃಷ್ಟತಾ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

2024-25ನೇ ಸಾಲಿನಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿರುವ 18 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡುವುದಾಗಿ ಮುಂಗಡ ಪತ್ರದ ಭಾಷಣದಲ್ಲಿ ಮುಖ್ಯಮಂತ್ರಿ ಘೋಷಿಸಿದ್ದರು. ಈ ಪೈಕಿ ತಲಾ 100 ವಿದ್ಯಾರ್ಥಿಗಳಿಗೆ ಒಂದು ವಿದ್ಯಾರ್ಥಿ ನಿಲಯದಂತೆ 15 ವಿದ್ಯಾರ್ಥಿ ನಿಲಯಗಳ ನಿರ್ಮಾಣವನ್ನು ಕೈಗೊಳ್ಳಲಾಗುವುದು. ಪ್ರತಿ ವಿದ್ಯಾರ್ಥಿ ನಿಲಯದ ವೆಚ್ಚ 7 ಕೋಟಿ ರೂ.ಗಳು. ಒಟ್ಟು ಯೋಜನಾ ವೆಚ್ಚ 105 ಕೋಟಿ ರೂ.ಗಳ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಅವರು ಮಾಹಿತಿ ನೀಡಿದರು.

ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಭಡ್ತಿ ಹೊಂದಲು ಪ್ರೌಢ ಶಾಲಾ ಶಿಕ್ಷಕರಿಗೆ ಸ್ನಾತಕೋತ್ತರ ಪದವಿಯಲ್ಲಿ ಶೇ.55 ರಷ್ಟು ಅಂಕಗಳನ್ನು ನಿಗದಿಪಡಿಸಿರುವುದನ್ನು ಪರಿಷ್ಕರಿಸಿ ಕನಿಷ್ಠ ಶೇ.50 ರಷ್ಟು ಅಂಕಗಳನ್ನು ನಿಗದಿಪಡಿಸಲು ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಕೇಂದ್ರಿಕೃತ ದಾಖಲಾತಿ ಘಟಕ ಅಥವಾ ಕರ್ನಾಟಕ ಲೋಕಸೇವಾ ಆಯೋಗಗಳನ್ನು ಉಪನ್ಯಾಸಕರ ವೃಂದದ ಆಯ್ಕೆ ಪ್ರಾಧಿಕಾರವೆಂದು ನಿಗದಿಪಡಿಸಲು ಮತ್ತು ಉಪನ್ಯಾಸಕ ವೃಂದದ ನೇರ ನೇಮಕಾತಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಮಾತ್ರ ಕನಿಷ್ಠ ಶೇ.50ರಷ್ಟು ಅಂಕಗಳನ್ನು ನಿಗದಿಪಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಒಂದೆಡೆ ತರುವ ಉದ್ದೇಶದಿಂದ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಸ್ಥಾಪಿಸಲು ಮತ್ತು ‘ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ’, ‘ಪ್ರಧಾನಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ’ ಮತ್ತು ‘ಸಂಕಲ್ಪ ಯೋಜನೆ’ಗಳನ್ನು ಕೌಶಲ್ಯಾಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಈ ವಿಶೇಷ ಅಭಿವೃದ್ಧಿ ವಾಹಕವು 5 ಕೋಟಿ ರೂ. ಅಧಿಕೃತ ಷೇರು ಬಂಡವಾಳ, 1 ಕೋಟಿ ರೂ. ಪೇಯ್ಡ್ ಅಪ್ ಕ್ಯಾಪಿಟಲ್, 100 ಕೋಟಿ ರೂ. ಮುಖಬೆಲೆಯ 5 ಲಕ್ಷ ಇಕ್ವೀಟಿ ಷೇರುಗಳನ್ನು ಹೊಂದಲು ಅವಕಾಶ ಕಲ್ಪಿಸಲಾಗಿದೆ. ಈ ಸರಕಾರಿ ಸಂಸ್ಥೆಗೆ 6 ಜನ ನಿರ್ದೇಶಕರನ್ನು ನೇಮಕ ಮಾಡಲು ಅವರಲ್ಲಿ 3 ಜನ ಪುರುಷ ಸರಕಾರೇತರ 2 ಮಹಿಳಾ ಸರಕಾರೇತರ ಹಾಗೂ ಐಟಿಬಿಟಿ ಇಲಾಖೆಯ ನಿರ್ದೇಶಕರು ಇರುತ್ತಾರೆ ಎಂದು ಅವರು ಮಾಹಿತಿ ನೀಡಿದರು.

ವಿಶ್ವದರ್ಜೆಗೆ ಬೃಂದಾವನ ಉದ್ಯಾನವನ: ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದ ಕೆಳಭಾಗದಲ್ಲಿನ 198 ಎಕರೆ ಜಾಗದಲ್ಲಿ ಉದ್ಯಾನವನ ಸೌಂದರ್ಯೀಕರಣ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳನ್ನು 2663.74 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲು ಈಗಾಗಲೇ ನೀಡಿರುವ ಅನುಮೋದನೆಯಂತೆ ಟೆಂಡರ್ ಕರೆಯುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದಿಸಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಕೃಷ್ಣರಾಜಸಾಗರ ಆಣೆಕಟ್ಟೆಯ ಬೃಂದಾವನ ಉದ್ಯಾನವನವನ್ನು ವಿಶ್ವದರ್ಜೆಗೆ ಉನ್ನತೀಕರಣಗೊಳಿಸುವ ಕಾಮಗಾರಿಗಳ ವಿಸ್ತೃತ ಯೋಜನಾ ವರದಿಯನ್ನು ಆರ್ಥಿಕ ಇಲಾಖೆ, ಯೋಜನಾ ಇಲಾಖೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ನೀಡಿರುವ ಅಭಿಪ್ರಾಯದನ್ವಯ ಪರಿಷ್ಕರಿಸಿ ಟೆಂಡರ್ ಮುಖಾಂತರ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಚೌಕಟ್ಟಿನಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಅವರು ಹೇಳಿದರು.

ಮುಖ್ಯ ಕಾರ್ಯದರ್ಶಿಯಾಗಿ ಡಾ.ಶಾಲಿನಿ ರಜನೀಶ್ ನೇಮಕ :

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್ ಇದೇ ಜು.31ಕ್ಕೆ ಸೇವಾ ನಿವೃತ್ತಿ ಹೊಂದುತ್ತಿರುವುದರಿಂದ ಅವರ ಸ್ಥಾನಕ್ಕೆ ಡಾ.ಶಾಲಿನಿ ರಜನೀಶ್ ಅವರನ್ನು ನೇಮಕ ಮಾಡಲಾಗಿದೆ. ನೂತನ ಮುಖ್ಯ ಕಾರ್ಯದರ್ಶಿಯಾಗಿ ಯಾರನ್ನು ನೇಮಕ ಮಾಡಬೇಕು ಎಂಬ ಅಧಿಕಾರವನ್ನು ಮುಖ್ಯಮಂತ್ರಿಗೆ ಅಧಿಕಾರ ವಹಿಸಲಾಗಿತ್ತು. ಅದರಂತೆ, ಇಂದಿನ ಸಚಿವ ಸಂಪುಟ ಸಭೆಯಲ್ಲಿ ರಜನೀಶ್ ಗೋಯಲ್ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಅಲ್ಲದೆ, ಶಾಲಿನಿ ರಜನೀಶ್ ಅವರನ್ನು ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News