ರಾಜ್ಯ ವಕ್ಫ್ ಮಂಡಳಿ | 15 ಮಹಿಳಾ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣ : ಸಂಪುಟ ಸಭೆಯ ನಿರ್ಣಯಗಳು

Update: 2024-09-17 15:31 GMT

ಕಲಬುರಗಿ : ರಾಜ್ಯದಲ್ಲಿರುವ ವಕ್ಫ್ ಸಂಸ್ಥೆಗಳು ಹೊಂದಿರುವ ನಿವೇಶನಗಳಲ್ಲಿ ವಕ್ಫ್ ಮಂಡಳಿ ಬ್ಯಾಂಕ್ ಖಾತೆಗಳಲ್ಲಿ ಲಭ್ಯವಿರುವ ಬಡ್ಡಿ ಮೊತ್ತದಲ್ಲಿ 15 ಮಹಿಳಾ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯನ್ನು 447.76 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ಕಲಬುರಗಿಯ ಮಿನಿ ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಈ ಕೆಳಗಿನಂತಿವೆ.

ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 12 ಪರಿಶಿಷ್ಟ ಜಾತಿ ಮತ್ತು ಒಂದು ಪರಿಶಿಷ್ಟ ವರ್ಗಗಳ ಒಟ್ಟು 13 ವಸತಿ ಶಾಲೆಗಳಿಗೆ ಅಂದಾಜು ವೆಚ್ಚ 286 ಕೋಟಿ ರೂ.ಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಗದಗ, ಕೊಪ್ಪಳ, ಚಾಮರಾಜನಗರದಲ್ಲಿನ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳಿಗೆ ಅವಶ್ಯವಿರುವ ವೈದ್ಯಕೀಯ ಉಪಕರಣ ಹಾಗೂ ಪೀಠೋಪಕರಣಗಳನ್ನು 149.03 ಕೋಟಿ ರೂ. ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಎಂ.ಆರ್.ಐ ಯಂತ್ರಗಳನ್ನು ಒಟ್ಟು 85.60 ಕೋಟಿ ರೂ.ಗಳ ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೆರೆ ತುಂಬಿಸುವ ಯೋಜನೆ ಕಾಮಗಾರಿಯನ್ನು 135 ಕೋಟಿ ರೂ. ಹಾಗೂ ಜೇವರ್ಗಿ ತಾಲೂಕಿನ ಹರವಾಳ ಗ್ರಾಮದ ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ಬಾಂದಾರು ಸಹಿತ ಸೇತುವೆ ನಿರ್ಮಾಣ ಕಾಮಗಾರಿಯನ್ನು 130 ಕೋಟಿ ರೂ. ಮತ್ತು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಕೆರೆ ತುಂಬಿಸುವ ಯೋಜನೆ ಕಾಮಗಾರಿಯನ್ನು 132 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ(ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದನೆ. ಪ್ರಧಾನಮಂತ್ರಿ ಜನ್ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆಯಡಿ ಪಿ.ಎಂ.ಜಿ.ಎಸ್.ವೈ ಮಾದರಿಯಂತೆ 23.766 ಕಿ.ಮೀ. ಉದ್ದದ 18 ರಸ್ತೆಗಳು ಹಾಗೂ 2 ಉದ್ದ ಸೇತುವೆ ಕಾಮಗಾರಿಗಳನ್ನು 30.47 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ.

ಕಲಬುರಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಜಿಟಿಟಿಸಿ ಬಹುಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಕೆಕೆಆರ್‍ಡಿಬಿ ಅನುದಾನದಿಂದ ಮೊದಲನೆ ಹಂತದಲ್ಲಿ 53.25 ಕೋಟಿ ರೂ.ವೆಚ್ಚದಲ್ಲಿ, ಗದಗ ಜಿಲ್ಲೆಯ ರೋಣದಲ್ಲಿ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರವನ್ನು 50 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಬಾರ್ಡ್ ಅನುದಾನದಲ್ಲಿ ಹಾಗೂ ಕೊಪ್ಪಳ ಜಿಲ್ಲೆಯ ತಳಕಲ್‍ನಲ್ಲಿ ಜಿಟಿಟಿಸಿ ಬಹುಕೌಶಲ್ಯಾಭಿವೃದ್ಧಿ ಕೇಂದ್ರವನ್ನು 53.25 ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.

ರಾಜ್ಯಾದ್ಯಂತ 43 ಕಾರ್ಮಿಕ ಅಧಿಕಾರಿಗಳ ವ್ಯಾಪ್ತಿಯಲ್ಲಿ ತಲಾ ಒಂದರಂತೆ ಸ್ಥಿರ ಮತ್ತು ಸಂಚಾರಿ ‘ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಸೇವಾ ಕೇಂದ್ರ’ಗಳನ್ನು 48.08 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲು ನಿರ್ಧಾರ. ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿನ ಅಧಿಕಾರಿ, ಸಿಬ್ಬಂದಿಗಳಿಗಾಗಿ ಸಮಗ್ರ ಟೌನ್ ಶಿಪ್ ಯೋಜನೆಯ ಅಂದಾಜು ವೆಚ್ಚ 998.50 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ.

ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಪಿಎ ಮಿತ್ರ ಜವಳಿ ಪಾರ್ಕ್‍ಗೆ ನೀರು ಸರಬರಾಜು ಮಾಡಲು ಪೈಪ್‍ಲೈನ್ ಮತ್ತು ಇತರೆ ಕಾಮಗಾರಿಗಳಿಗೆ 116 ಕೋಟಿ ರೂ., ಭೀಮಾ ನದಿಗೆ ಅಡ್ಡಲಾಗಿ ಅಣೆಕಟ್ಟು 35 ಕೋಟಿ ರೂ., ವಿದ್ಯುತ್ ಪವರ್ ಸ್ಟೇಷನ್‍ಗೆ 229.28 ಕೋಟಿ ರೂ. ಮತ್ತು ರಸ್ತೆ ನಿರ್ಮಾಣಕ್ಕೆ 9.98 ಕೋಟಿ ರೂ.ಸೇರಿದಂತೆ ಒಟ್ಟು 390.26 ಕೋಟಿ ರೂ.ಗಳನ್ನು ರಾಜ್ಯ ಸರಕಾರದಿಂದ ನೀಡಲು ಅನುಮೋದನೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News