ಚಂದ್ರಶೇಖರ್ ಆಝಾದ್ ಮೇಲಿನ ದಾಳಿ ಹಾಗೂ ಕೋಲಾರದ ಮರ್ಯಾದೆಗೇಡು ಹತ್ಯೆ ಖಂಡಿಸಿ ಬಹುತ್ವ ಕರ್ನಾಟಕ, ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

Update: 2023-07-04 18:28 GMT

ಬೆಂಗಳೂರು, ಜು.4: ದೇಶದಲ್ಲಿ ಉಲ್ಬಣವಾಗುತ್ತಿರುವ ಭಯೋತ್ಪಾದಕರಿಗೆ ಸರಕಾರ ಹಾಗೂ ನ್ಯಾಯಾಲಯದ ಭಯವಿಲ್ಲದಂತಾಗಿದ್ದು, ಇದರಿಂದ ದಾಳಿ, ಕೊಲೆ, ದರೋಡೆ, ಅತ್ಯಾಚಾರ, ಮರ್ಯಾದಾ ಹತ್ಯೆಗಳಂತಹ ವಿಕೃತ ಘಟನೆಗಳು ಹೆಚ್ಚುತ್ತಿವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹಾಗೂ ನ್ಯಾಯವಾದಿ ಸಿ.ಎಸ್.ದ್ವಾರಕಾನಾಥ್ ವಿಷಾದ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಪ್ರೀಡಂ ಪಾರ್ಕ್‍ನಲ್ಲಿ ತಮಟೆ, ಬಹುತ್ವ ಕರ್ನಾಟಕ, ಕರ್ನಾಟಕ ಜನಶಕ್ತಿ, ಕ್ರಾಂತಿಕಾರಿ ಕುವೆಂಪು ಹೊರಾಟ ಸಮಿತಿ ಹಾಗು ಇತರೆ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಚಂದ್ರಶೇಖರ್ ಆಝಾದ್ ರಾವಣ್ ಅವರ ಮೇಲಿನ ದಾಳಿ ಹಾಗೂ ಕೋಲಾರದ ಮರ್ಯಾದೆಗೇಡು ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಚಂದ್ರಶೇಖರ್ ಆಝಾದ್ ರಾವಣ್ ಅವರ ಮೇಲಿನ ದಾಳಿಯ ಹಿಂದೆ ಆರೆಸೆಸ್ಸ್‍ನ ಸಂಘ ಪರಿವಾರದ ಕೈವಾಡವಿದೆ ಎಂದು ಆರೋಪಿಸಿದರು.

ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಬಂದ ನಂತರ ಉತ್ತರಪ್ರದೇಶ ಭಯೋತ್ಪಾದಕರ ರಾಜ್ಯವಾಗಿದೆ. ಅಲ್ಲಿ ಪ್ರಮುಖವಾಗಿ ದಲಿತರು, ಆದಿವಾಸಿಗಳು, ಮುಸ್ಲಿಮ್ ಸಮುದಾಯ ಹಾಗೂ ತಳ ಸಮುದಾಯಗಳನ್ನು ಗುರಿಯಾಗಿಸಿ ಹಿಂಸಿಸಲಾಗುತ್ತದೆ. ಇದೆಲ್ಲವೂ ವ್ಯವಸ್ಥಿತವಾದ ರಾಜ್ಯ ಪ್ರಾಯೋಜಿತ ದಾಳಿಯಾಗಿದೆ ಎಂದು ಸಿ.ಎಸ್.ದ್ವಾರಕಾನಾಥ್ ಆಕ್ರೋಶ ವ್ಯಕ್ತಪಡಿಸಿದರು.

ರಾತ್ರಿ ಸಮಯದಲ್ಲಿ ನಡೆಯುತ್ತಿದ್ದ ಕೊಲೆ, ಸುಲಿಗೆಗಳು ಈಗ ಹಗಲಿನಲ್ಲಿ ನಡೆಯುತ್ತಿವೆ. ಇದು ಆತಂಕಕಾರಿ ಬೆಳವಣಿಗೆ. ಉತ್ತರ ಪ್ರದೇಶದಲ್ಲಿ ಹಲವಾರು ಅಮಾಯಕರ ಮೇಲಿನ ದಾಳಿಗಳ ಹಿಂದೆ ಅಲ್ಲಿನ ರಾಜ್ಯ ಸರಕಾರ ಹಾಗೂ ಕೇಂದ್ರದ ಬಿಜೆಪಿ ಸರಕಾರದ ಹಸ್ತಕ್ಷೇಪವಿದೆ. ಈ ದಾಳಿಕೋರರಿಗೆ ಪೊಲೀಸರ, ನ್ಯಾಯಾಲಯದ ಭಯ ಇಲ್ಲವಾಗಿದೆ. ಇದೆಲ್ಲವನ್ನೂ ದೇಶಾದ್ಯಂತ ಪ್ರಜ್ಞಾವಂತರು ಗಂಭೀರವಾಗಿ ಪರಿಗಣಿಸದಿದ್ದರೆ ಮಣಿಪುರದ ಉದ್ವಿಗ್ನತೆ ದೇಶದೆಲ್ಲೆಡೆಯೂ ಹಬ್ಬುವುದರಲ್ಲಿ ಅನುಮಾನವಿಲ್ಲ ಎಂದು ಸಿ.ಎಸ್.ದ್ವಾರಕಾನಾಥ್ ಆತಂಕ ವ್ಯಕ್ತಪಡಿಸಿದರು.

Full View

ಸಾಹಿತಿ ಎಲ್.ಎನ್.ಮುಕುಂದರಾಜ್ ಮಾತನಾಡಿ, ದೇಶದ ವಿವಿಧ ಕಡೆಗಳಲ್ಲಿ ಹೆಚ್ಚುತ್ತಿರುವ ವಿಕೃತ್ಯ ಘಟನೆಗಳ ಕುರಿತು ನಾವು ತೀವ್ರವಾಗಿ ಖಂಡಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವವರೆಗೂ ನಮ್ಮ ಹೋರಾಟ, ಪ್ರತಿಭಟನೆಗಳು ನಿಲ್ಲಬಾರದು. ಸಮಾಜ ವಿರೋಧಿ ಕೃತ್ಯಗಳಿಗೆ ತಿರುಗಿ ಬೀಳದಿದ್ದರೆ ನಮ್ಮ ಮುಂದಿನ ಪೀಳಿಗೆ ಸೌಹಾರ್ದಯುತವಾಗಿ ಬದುಕಲು ಸಾಧ್ಯವಾಗುವುದಿಲ್ಲ ಎಂದರು.

ವಕೀಲ ಹರಿರಾಮ್ ಮಾತನಾಡಿ, ಪೊಲೀಸರು ಮತ್ತು ನ್ಯಾಯಾಂಗ ವ್ಯವಸ್ಥೆ ಸೇರಿ ಅಟ್ರಾಸಿಟಿ ಕಾಯ್ದೆಯನ್ನು ಕಠಿಣವಾಗಿ ಜಾರಿ ಮಾಡುವಲ್ಲಿ ವಿಫಲರಾಗಿ ಕಾಯ್ದೆಯನ್ನು ದುರ್ಬಲಗೊಳಿಸಿರುವುದರಿಂದ ಮಾರ್ಯಾದಾ ಹತ್ಯೆ ಹೆಸರಿನಲ್ಲಿ ಅಮಾನವೀಯವಾಗಿ ಕೃತ್ಯಗಳು ಹೆಚ್ಚಾಗಿವೆ. ಇದೊಂದು ಮಾನಸಿಕ ಭಯೋತ್ಪಾದನೆಯಾಗಿದ್ದು, ಐಪಿಸಿಗಳಲ್ಲಿ ಕಾನೂನು ತಿದ್ದುಪಡಿ ತಂದು ಈ ರೀತಿಯ ಜಾತಿ ಸಂಬಂಧಿತ ಕೃತ್ಯ ಎಸಗುವವರಿಗೆ ಮೊದಲು ಹುಚ್ಚಾಸ್ಪತ್ರೆಗೆ ಕಳಿಸಿ ಅಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವ ತರಬೇತಿ ನೀಡಿ ನಂತರ ಜೈಲಿಗೆ ಹಾಕಬೇಕು. ಇತ್ತೀಚೆಗೆ ಜನರು ಜೈಲಿಗೆ ಹೋಗುವುದನ್ನೂ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಆದ್ದರಿಂದ ಕೃತ್ಯ ಎಸಗುವವರು ಹುಚ್ಚಾಸ್ಪತ್ರೆಯಲ್ಲಿ ತರಬೇತಿ ಪಡೆದರೆ ಸಮಾಜ ಅವರನ್ನು ನೋಡುವ ದೃಷ್ಠಿಕೋನ ಬದಲಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡುವ ನಿಟ್ಟಿನಲ್ಲಿ ಜಾತಿ ದೌರ್ಜನ್ಯ ಹಾಗು ಜಾತಿ ವಿನಾಶಕ್ಕಾಗಿ ಪ್ರತಿಭಟನಾಕಾರರು ಕೆಲವು ಹಕ್ಕೊತ್ತಾಯಗಳನ್ನು ಸರಕಾರದ ಮುಂದಿಟ್ಟಿದ್ದು, ಜಾತಿ ಸಂಬಂಧಿತ ಹಿಂಸಾಚಾರವನ್ನು ಪರಿಹರಿಸುವುದು ಮತ್ತು ಎಲ್ಲಾ ರೀತಿಯ ಜಾತಿ ದೌರ್ಜನ್ಯಗಳನ್ನು ಕೊನೆಗೊಳಿಸಲು ಮುಂದಿನ ದಾರಿ ಬಗ್ಗೆ ಚರ್ಚಿಸಲು ಬಜೆಟ್ ಅಧಿವೇಶನದಲ್ಲಿ ಒಂದು ದಿನವನ್ನು ನಿಗದಿಪಡಿಸಬೇಕು.

ಜಾತಿಯನ್ನು ವಿನಾಶ ಮಾಡುವ ಉದ್ದೇಶದಿಂದ ಬಜೆಟ್‍ನಲ್ಲಿ ಕಾರ್ಯಕ್ರಮವನ್ನು ಘೋಷಿಸಬೇಕು. ಕೆಲಸದ ಸ್ಥಳಗಳಲ್ಲಿ ನಡೆಯುತ್ತಿರುವ ಜಾತಿ, ತಾರತಮ್ಯ ಬಗ್ಗೆ ಅಧ್ಯಯನವನ್ನು ಪ್ರಾರಂಭಿಸಿ ಮತ್ತು ಅದನ್ನು ಕೊನೆಗೊಳಿಸಲು ಮಾರ್ಗಗಳು ಏನಿರಬಹುದು ಎಂಬುದು ಚರ್ಚಿಸಿ ತೀರ್ಮಾನಿಸಬೇಕು.

ಸರಕಾರದ ಮಂತ್ರಿಗಳು ಅಸ್ಪೃಶ್ಯತೆ ಮತ್ತು ಜಾತಿ ಆಧಾರಿತ ದೌರ್ಜನ್ಯಗಳನ್ನು ಸಾರ್ವಜನಿಕವಾಗಿ ಖಂಡಿಸಲು ಮತ್ತು ಜಾತಿ ವಿನಾಶಕ್ಕಾಗಿ ಕೆಲಸ ಮಾಡುವಂತೆ ಕ್ರಮ ತೆಗೆದುಕೊಳ್ಳಬೇಕು. ಹಿಂಸಾಚಾರದಲ್ಲಿ ಹಾನಿಗೊಳಗಾದ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಘೋಷಿಸಿ ಮತ್ತು ಸರಿಯಾದ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳಬೇಕು.

ಸಂಕಷ್ಟದಲ್ಲಿರುವ ಅಂತರ್ಜಾತಿ ದಂಪತಿಗಳಿಗೆ ರಕ್ಷಣೆ ಒದಗಿಸಲು ವಿಶೇಷ ಸಹಾಯವಾಣಿಯನ್ನು ಸ್ಥಾಪಿಸಿಬೇಕು. ಜಾತಿ ತಾರತಮ್ಯವು ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಜಾತಿಯು ವಿವಿಧ ರೀತಿಯಲ್ಲಿ ಹೇಗೆ ಪ್ರಕಟವಾಗುತ್ತದೆ ಎಂಬುದನ್ನು ಒಳಗೊಂಡ ಕಡ್ಡಾಯ ಜಾಗೃತಿ ಕಾರ್ಯಕ್ರಮಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನಡೆಸಬೇಕು ಎಂಬಿತ್ಯಾದಿ ಅಂಶಗಳನ್ನು ಅನುಷ್ಠಾನಗೊಳಿಸುವಂತೆ ಸರಕಾರವನ್ನು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಹಿರಿಯ ವಕೀಲ ಬಿ.ಟಿ.ವೆಂಕಟೇಶ್, ಸಾಹಿತಿ ದು.ಸರಸ್ವತಿ, ಕಾರ್ಮಿಕ ಮುಖಂಡರಾದ ಮೈತ್ರೆಯಿ, ಡೊಮೆಸ್ಟಿಕ್ ವರ್ಕರ್ಸ್ ಯೂನಿಯನ್‍ನ ಗೀತಾ ಮೆನನ್, ಸ್ವರಾಜ್ ಅಭಿಯಾನದ ಖಿಜರ್ ಅಲಾಂ, ಬಹುತ್ವ ಕರ್ನಾಟಕದ ವಿನಯ್ ಶ್ರೀನಿವಾಸ್, ಚಿಂತಕರಾದ ಹಾ.ರಾ ಮಹೇಶ್, ಭಾಸ್ಕರ್ ಪ್ರಸಾದ್, ಕರ್ನಾಟಕ ಮಹಿಳಾ ದೌರ್ಜನ್ಯವಿರೋಧಿ ಒಕ್ಕೂಟದ ಗೌರಿ ಸೇರಿ 200 ಕ್ಕೂ ಹೆಚ್ಚು ಪ್ರಗತಿಪರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News