ಡಿ.ಕೆ.ಶಿವಕುಮಾರ್‌ರನ್ನು ಟಾರ್ಗೆಟ್ ಮಾಡಲು ಸಾಧ್ಯವಿಲ್ಲ : ಡಿ.ಕೆ.ಸುರೇಶ್

Update: 2024-06-29 13:11 GMT

ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಯಾರೂ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಅವರನ್ನು ಟಾರ್ಗೆಟ್ ಮಾಡುತ್ತೇನೆ ಎಂದರೆ ಅದು ಅವರ ಭ್ರಮೆ ಅಷ್ಟೇ’ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಶನಿವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರದ್ದೇ ವ್ಯಕ್ತಿತ್ವದಲ್ಲಿ ಹೋರಾಟದ ಮಾಡುತ್ತಿದ್ದಾರೆ. 35 ವರ್ಷಗಳ ಸುದೀರ್ಘ ರಾಜಕಾರಣದಲ್ಲಿದ್ದು, ಯಾರದ್ದೋ ಹೆಸರಿನಲ್ಲಿ ರಾಜಕೀಯಕ್ಕೆ ಬಂದವರಲ್ಲ. ಹೋರಾಟದ ಮೂಲಕ ರಾಜಕಾರಣ ಮಾಡಿಕೊಂಡು ಬಂದವರು ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

‘ಸಿಎಂ ಮತ್ತು ಡಿಸಿಎಂ ಹುದ್ದೆಗಳಿಗಾಗಿ ಆಸೆ ಪಡುತ್ತಿರುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ. ತಮ್ಮ ತಮ್ಮ ನಾಯಕತ್ವದಲ್ಲಿ ಪಕ್ಷವನ್ನು ಮುನ್ನಡೆಸಿ ಚುನಾವಣೆಯಲ್ಲಿ ಗೆದ್ದು ಸಿಎಂ ಅದರೂ ಅಗಲಿ, ಡಿಸಿಎಂ ಅದರೂ ಅಗಲಿ, ಯಾರು ಬೇಡ ಅಂತಾರೆ?. ಈ ಹಿಂದೆ ಕಡಿಮೆ ಸ್ಥಾನಗಳನ್ನು ಗೆದ್ದ ಕಾರಣ ರಾಮಕೃಷ್ಣ ಹೆಗಡೆ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆ ನಡೆಸಿದ್ದರು, ಅದರಲ್ಲಿ ತಪ್ಪೇನೂ ಇಲ್ಲ’ ಎಂದು ಸುರೇಶ್ ವಿಶ್ಲೇಷಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂದ ಗೆಲುವಿನ ಶ್ರೇಯಸ್ಸು ಕಾರ್ಯಕರ್ತರಿಗೆ ಸಲ್ಲಬೇಕು. ಎರಡೂವರೆ ವರ್ಷಗಳ ಕಾಲ ಅವರು ಹಗಲಿರುಳು ಬೆವರು ಸುರಿಸಿ ಶ್ರಮಪಟ್ಟ ಕಾರಣ ಪಕ್ಷ ಗೆಲ್ಲುವುದು ಸಾಧ್ಯವಾಯಿತು. ಉತ್ತಮ ಆಡಳಿತ ನಡೆಸಲಿ ಎಂದು ಹೈಕಮಾಂಡ್ ಜವಾಬ್ದಾರಿ ನೀಡಿದೆ. ಅವರಿಗೆ ಯೋಗ್ಯತೆ ಇಲ್ಲ ಎನ್ನುವುದಾದರೆ ಚುನಾವಣೆಗೆ ಹೋಗುವುದು ವಾಸಿ ಎಂದು ಅವರು ನುಡಿದರು.

‘ಯಾರೂ ಶಾಶ್ವತ ಅಲ್ಲ, ಯಾವ ಹುದ್ದೆಯೂ ಶಾಶ್ವತ ಅಲ್ಲ. ಹೇಳಿಕೆ ಕೊಡುವವರೂ ಹಿಂದೆ ತಿರುಗಿ ತಮ್ಮ ಬೆನ್ನನ್ನು ನೋಡಿಕೊಳ್ಳಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದ ಸುರೇಶ್, ಚಂದ್ರಶೇಖರ್ ಸ್ವಾಮೀಜಿ ಅವರ ವೈಯಕ್ತಿಕ ಅಭಿಪ್ರಾಯವನ್ನು ತಿಳಿಸಿದ್ದಾರೆ. ಸಿಎಂ ಸ್ಥಾನದ ಬಗ್ಗೆ ವರಿಷ್ಠರು ತೀರ್ಮಾನಿಸುತ್ತಾರೆ. ಸಧ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News