ಮಹೇಶ್ ‌ಹೆಗಡೆ ವಿರುದ್ಧದ ಪ್ರಕರಣ: ವಿಚಾರಣೆ ಹಿಂಪಡೆಯಲು ಮುಂದಾದ ರಾಜ್ಯ ಸರಕಾರ

Update: 2023-10-12 16:24 GMT

ಮಹೇಶ್ ‌ಹೆಗಡೆ

ಕಾರವಾರ: ಹೊನ್ನಾವರದಲ್ಲಿ ನಡೆದ ಪರೇಶ ಮೇಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜದಲ್ಲಿ ಶಾಂತಿ ಕದಡುವ ಕೃತ್ಯದ ಆರೋಪ ಎದುರಿಸುತ್ತಿದ್ದ ಪೋಸ್ಟ್ ಕಾರ್ಡ್ ನ್ಯೂಸ್ ಜಾಲತಾಣ ಬಳಕೆದಾರರಾದ ಮಹೇಶ್ ‌ಹೆಗಡೆ ಮತ್ತು ವಿವೇಕ ಶೆಟ್ಟಿ ವಿರುದ್ಧ ಯಾವುದೇ ಸೂಕ್ತ ಪುರಾವೆ ಲಭ್ಯವಾಗದ ಕಾರಣ ಆರೋಪಿಗಳ ವಿರುದ್ಧದ ಪ್ರಕರಣದ ವಿಚಾರಣೆ ಹಿಂಪಡೆಯಲು ರಾಜ್ಯ ಸರಕಾರ ಮುಂದಾಗಿರುವುದು ಬೆಳಕಿಗೆ ಬಂದಿದೆ.

ಕಳೆದ ಆರು ವರ್ಷಗಳ ಹಿಂದೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ವಿವೇಕ ಶೆಟ್ಟಿ ಹಾಗೂ ಮಹೇಶ ಹೆಗಡೆ ವಿರುದ್ಧ ಸಮಾಜದಲ್ಲಿ ಶಾಂತಿ ಕದಡುವ ವಿಚಾರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರರು ದೂರು ನೀಡಿದ ಹಿನ್ನೆಲೆಯಲ್ಲಿ, ತನಿಖೆ ಕೈಗೊಂಡು ಪೊಲೀಸರು ಸಲ್ಲಿಸಿದ್ದ ‘ಸಿ’ ರಿಪೋರ್ಟ್ ಆಧರಿಸಿ ನ್ಯಾಯಾಲಯವು ಒಪ್ಪಿಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ತನಿಖೆಯಿಂದ ಆರೋಪಿತರ ಪತ್ತೆ ಹೊರಡದ ಕಾರಣ ಪ್ರಕರಣವನ್ನು ತುರ್ತು ನಾಪತ್ತೆ ಎಂದು ಪರಿಗಣಿಸಿ ಸಿಜೆಎಂ ನ್ಯಾಯಾಲಯಕ್ಕೆ ಕಳೆದ 2021ರ ಎಪ್ರಿಲ್ 8ರಂದು ಸಿ ರಿಪೋರ್ಟ್ ಸಲ್ಲಿಸಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆದು 2021ರ ಅಕ್ಟೋಬರ್‌ ನಲ್ಲಿ ಅಂತಿಮ ವರದಿ ಅಂಗಿಕೃತವಾಗಿದೆ. ಇದರಿಂದ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆದುಕೊಳ್ಳುವ ಯಾವುದೇ ಅಭ್ಯಂತರವಿಲ್ಲ ಎಂದು ಅಭಿಪ್ರಾಯ ಪಡಲಾಗಿದೆ.

ಇದರಿಂದ ಕಾರವಾರ ಪೊಲಿಸ್ ಠಾಣೆಯಿಂದ ಈ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆದುಕೊಳ್ಳಬಹುದಾಗಿದೆ. ಪ್ರಕರಣವನ್ನು ಹಿಂಪಡೆಯುವ ಸಂಬಂಧ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಆದೇಶಕ್ಕೆ ಕಡತವನ್ನು ಮಂಡಿಸಲಾಗಿದೆ ಎಂದು ದಾಖಲೆಗಳಿಂದ ತಿಳಿದು ಬಂದಿದೆ.


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News