ನವೆಂಬರ್​ನಲ್ಲಿ ಜಾತಿ ಗಣತಿ ವರದಿ ನನ್ನ ಕೈ ಸೇರಬಹುದು: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2023-10-07 07:46 GMT

ಮೈಸೂರು: ʼʼಸಾಮಾಜಿಕ,ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿಯಬೇಕು ಎಂದರೆ ಜಾತಿ ಗಣತಿ ಮುಖ್ಯ. ಇದರ ಆಧಾರದ ಮೇಲೆಯೇ ಯಾವ ಜಾತಿ ಎಷ್ಟು ಹಿಂದುಳಿದಿದೆ ಎಂದು ತಿಳಿಯಬಹುದುʼʼ ಎಂದು ಜಾತಿಗಣತಿಯಿಂದ ದೇಶ ಇಬ್ಬಾಗವಾಗಲಿದೆ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. 

ವಿಶೇಷ ವಿಮಾದ ಮೂಲಕ ಮೈಸೂರಿಗೆ ಆಗಮಿಸಿದ ಅವರು ಮಂಡಕಳ್ಳಿ ವಿಮಾನದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼʼಪ್ರಧಾನಮಂತ್ರಿ ನರೇಂದ್ರ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಮುಸ್ಲಿಮರಿಗೆ ಒಂದು ಸೀಟು ಕೊಡದೆ ಇವರು ʼಸಬ್ ಕಾ ಸಾಥ್ ಸಬ್ ಕಾ ವಿಕಾಸ್ʼ ಎನ್ನುವುದರಲ್ಲಿ ಅರ್ಥವಿಲ್ಲ, ನಾವು ಏನು ಹೇಳುತ್ತೇವೋ ಅದು ಸರಿಯಾಗಿರಬೇಕು, ವಸ್ಥುಸ್ಥಿತಿ ಬೇರೆ, ಹೇಳಿಕೆ ಬೇರೆ ಇರಬಾರದು. ಸತ್ಯವನ್ನು ಹೇಳಬೇಕುʼʼ ಎಂದು ಕುಟುಕಿದರು.

ʼʼನವೆಂಬರ್​ನಲ್ಲಿ ವರದಿʼʼ

ʼʼಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳನ್ನು ತಿಳಿದರೆ ಯಾವ ಜಾತಿ ಎಷ್ಟು ಹಿಂದುಳಿದಿದೆ ಎಂಬ ಅಂಕಿ ಅಂಶ ತಿಳಿಯುತ್ತದೆ. ಇದರಿಂದ ಸಮ‌ ಸಮಾಜ ನಿರ್ಮಾಣ ಮಾಡಲು ಸಾಧ್ಯ, ಆ ನಿಟ್ಟಿನಲ್ಲಿ ನಾನು ಹಿಂದೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಸರ್ವೆ ಮಾಡಿಸಿದ್ದೆ.‌ಕಾಂತರಾಜು ಅಂದಿನ‌ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವರದಿ ಸಲ್ಲಿಸಿದ್ದರು. ಅವರು ಸ್ವೀಕರಿಸಿರಲಿಲ್ಲ. ಈಗಿನ ಅಧ್ಯಕ್ಷರಿಗೆ ಕಾಂತರಾಜು ವರದಿ ಸಲ್ಲಿಸುವಂತೆ ಹೇಳಿದ್ದೇನೆ. ಅವರು ನವೆಂಬರ್ ಗೆ ವರದಿ ನೀಡುವುದಾಗಿ ಹೇಳಿದ್ದಾರೆʼʼ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ʼʼಹೇಳಿ ಕೇಳಿ ಜಾತಿ ವ್ಯವಸ್ಥೆ ನಾವು ಮಾಡಿರುವುದಲ್ಲ, ಹಿಂದಿನಿಂದಲೂ ಜಾತಿ ವ್ಯವಸ್ಥೆ ಬಂದಿದೆ. ಈ ವರದಿ ಆಧರಿಸಿ ಯಾವ ಜಾತಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದೆ ಎಂಬುದನ್ನು ತಿಳಿಯಬಹುದು. ನಂತರ ಅತೀ ಹಿಂದುಳಿದ ಜಾತಿಗಳ ಸ್ಥಿತಿಗತಿಗಳು ತಿಳಿಯಲಿದೆʼʼ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News