ಪುಲ್ವಾಮ ದುರಂತದ ಬಗ್ಗೆ ಸತ್ಯ ಹೇಳಿದ್ದ ಸತ್ಯಪಾಲ್ ಮಲಿಕ್ ರನ್ನು ಕೇಂದ್ರ ಸರಕಾರ ಬೆದರಿಸುತ್ತಿದೆ : ಸಿಎಂ ಸಿದ್ದರಾಮಯ್ಯ

Update: 2024-02-23 10:56 GMT

ಬೆಂಗಳೂರು : "40 ದೇಶಪ್ರೇಮಿ ಸೈನಿಕರನ್ನು ಬಲಿತೆಗೆದುಕೊಂಡ ಪುಲ್ವಾಮ ದುರಂತದ ಬಗ್ಗೆ ಸತ್ಯ ಹೇಳಿದ್ದೇ ಮಾಜಿ ರಾಜ್ಯಪಾಲರು ಮತ್ತು ಬಿಜೆಪಿಯ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷರಾದ ಸತ್ಯಪಾಲ್ ಮಲಿಕ್ ಅವರ ಅಪರಾಧವಾಗಿ ಹೋಯಿತು. ನಿರೀಕ್ಷೆಯಂತೆ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿ, ಬೆದರಿಸುವ ಪ್ರಯತ್ನ ಮಾಡಿದೆ" ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟನೆ ಹೊರಡಿಸಿರುವ ಅವರು, "ಪುಲ್ವಾಮ ದುರಂತ ನಡೆದ ಸಮಯದಲ್ಲಿ ಸತ್ಯಪಾಲ್ ಮಲಿಕ್ ಅವರು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಕಾರಣ ಕೇಂದ್ರದ ವಿರುದ್ಧದ ಅವರ ಆರೋಪವನ್ನು ತಳ್ಳಿಹಾಕಲಾಗದು. ಸತ್ಯವನ್ನು ಎದುರಿಸಲಾಗದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನಿರೀಕ್ಷೆಯಂತೆ ಅವರಿಗೆ ಸಿಬಿಐ ತನಿಖೆ ಮೂಲಕ ಚಿತ್ರಹಿಂಸೆ ನೀಡಲು ಹೊರಟಿದೆ, ಈ ಕೃತ್ಯ ಅತ್ಯಂತ ಖಂಡನೀಯ" ಎಂದು ಹೇಳಿದ್ದಾರೆ.

"ಕೇಂದ್ರ ಸರಕಾರ ತನ್ನ ದುಷ್ಟಬುದ್ದಿಯನ್ನು ತಿದ್ದಿಕೊಂಡು, ಸತ್ಯಪಾಲ್ ಮಲಿಕ್ ಅವರ ಮೇಲಿನ ದೌರ್ಜನ್ಯ ನಿಲ್ಲಿಸಬೇಕು. ಸತ್ಯವನ್ನು ಸಹಿಸದಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಪ್ರಶ್ನಿಸುವವರ ವಿರುದ್ಧ ಐಟಿ, ಇಡಿ, ಸಿಬಿಐಗಳನ್ನು ಛೂ ಬಿಟ್ಟು ಬಲತ್ಕಾರದಿಂದ ಬಾಯಿ ಮುಚ್ಚಿಸುವ ಪ್ರಯತ್ನನ್ನು ಮುಂದುವರಿಸಿದ್ದಾರೆ. ಆದರೆ ದೇಶದ ಜನತೆ ಇಂತಹ ಕುಟಿಲ ಕಾರಸ್ತಾನಗಳನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧರಾಗಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News