ಬೆಂಗಳೂರು: ಹಾಡುಹಗಲೇ ಕಚೇರಿಗೆ ನುಗ್ಗಿ ಏರೋನಿಕ್ಸ್ ಕಂಪೆನಿ ಸಿಇಒ, ಎಂಡಿ ಹತ್ಯೆ
ಬೆಂಗಳೂರು, ಜು.11: ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿ ಹಾಡಹಗಲೇ ಖಾಸಗಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಅನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಮಂಗಳವಾರ ವರದಿಯಾಗಿದೆ.
ಫಣೀಂದ್ರ ಸುಬ್ರಹ್ಮಣ್ಯ ಹಾಗೂ ವಿನು ಕುಮಾರ್ ಎಂಬುವರನ್ನು ಕಂಪೆನಿಯ ಮಾಜಿ ಉದ್ಯೋಗಿ ಫಿಲಿಕ್ಸ್ ಸೇರಿ ಮೂವರು ಈ ಕೃತ್ಯವೆಸಗಿದ್ದಾರೆ ಎಂದು ಈಶಾನ್ಯ ವಿಭಾಗದ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಏರೋನಿಕ್ಸ್ ಮೀಡಿಯಾ ಪ್ರೈ. ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಫಣೀಂದ್ರ ಸುಬ್ರಹ್ಮಣ್ಯ ಮತ್ತು ಅದೇ ಕಂಪೆನಿಯಲ್ಲಿ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದ ವಿನು ಕುಮಾರ್ ಅವರನ್ನು ಮಂಗಳವಾರ 4 ಗಂಟೆ ಸುಮಾರಿಗೆ ಮಾರಕಾಸ್ತ್ರಗಳೊಂದಿಗೆ ಅಮೃತಹಳ್ಳಿಯಲ್ಲಿರುವ ಕಂಪೆನಿ ಕಚೇರಿಗೆ ನುಗ್ಗಿದ್ದ ಫಿಲಿಕ್ಸ್ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ. ಆನಂತರ, ಮತ್ತೊಂದು ಮಹಡಿ ಮೂಲಕ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಕೆಲ ದಿನಗಳ ಹಿಂದೆ ಕೆಲಸ ಬಿಟ್ಟು ಪ್ರತ್ಯೇಕವಾಗಿ ಕಂಪೆನಿ ತೆರೆದಿದ್ದ ಫಿಲಿಕ್ಸ್ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದಾರೆ.