ಚೈತ್ರಾ ಕುಂದಾಪುರ ವಂಚನೆ ಪ್ರಕರಣ: 2 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ವಶ

Update: 2023-09-21 15:27 GMT

ಬೆಂಗಳೂರು, ಸೆ.21: ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ 5 ಕೋಟಿ ರೂ. ವಂಚಿಸಿದ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಆರೋಪಿಗಳಿಂದ ಇಲ್ಲಿಯವರೆಗೆ ನಗದು, ಚಿನ್ನ ಸೇರಿ ಒಟ್ಟು 2 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಗುರುವಾರ ವಂಚನೆ ಪ್ರಕರಣದ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ‘ವಂಚನೆ ಪ್ರಕರಣದಲ್ಲಿ ಈವರೆಗೆ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ. ನಗದು ಚಿನ್ನ ಸೇರಿ 2 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಚೈತ್ರಾ ಕುಂದಾಪುರ ಸೇರಿದಂತೆ ಎಲ್ಲರಿಂದಲೂ ಬೇರೆ ಬೇರೆ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೈತ್ರಾ ಕುಂದಾಪುರ ಕಡೆಯಿಂದ ಡಿಡಿ, ಚಿನ್ನಾಭರಣ, ಕಾರು, ನಗದನ್ನು ವಶಕ್ಕೆ ಪಡೆಯಲಾಗಿದೆ. ಹಾಲಶ್ರೀ ಸ್ವಾಮೀಜಿಯವರಿದ್ದ ವಿಜಯಪುರದ ಹಿರೇಹಡಗಲಿಯಲ್ಲಿರುವಂತಹ ಅವರ ಮಠದಲ್ಲಿ 56 ಲಕ್ಷ ರೂ. ನಗದು ಹಾಗೂ ಇನ್ನೊಬ್ಬ ವ್ಯಕ್ತಿಯಿಂದ 20 ಲಕ್ಷ ರೂ. ನಗದು ಸೇರಿದಂತೆ ಈವರೆಗೆ ಒಟ್ಟು 2 ಕೋಟಿಗೂ ಹೆಚ್ಚು ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.

8 ಆರೋಪಿಗಳ ಹೊರತಾಗಿಯೂ ಪ್ರಕರಣದ ಸಂಬಂಧ ಪ್ರಣವ್ ಪ್ರಸಾದ್, ತಿಪ್ಪೇಸ್ವಾಮಿ ಸೇರಿದಂತೆ ನಾಲ್ವರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದು, ಇದರಂತೆ ಪ್ರಣವ್ ಪ್ರಸಾದ್ ವಿಚಾರಣೆಗೆ ಹಾಜರಾಗಿದ್ದಾರೆ. ಉಳಿದ ಹಲವರನ್ನು ಸಿಸಿಬಿ ಪೊಲೀಸರು ತನಿಖೆಯ ಭಾಗವಾಗಿ ಕೂಲಂಕಷವಾಗಿ ವಿಚಾರಣೆಗೆ ಮುಂದಾಗಿದ್ದಾರೆ. ಪ್ರಕರಣ ತನಿಖೆಯ ಹಂತದಲ್ಲಿರುವುದರಿಂದ ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಬಂಧಿತ ಎಂಟು ಮಂದಿಯಿಂದ ಸಿಸಿಬಿ ಪೊಲೀಸರು ಎಲ್ಲ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ ಎಂದು ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News