ಸಿಸಿಬಿ ಕಚೇರಿಯಲ್ಲಿ ಕುಸಿದುಬಿದ್ದ ಚೈತ್ರಾ ಕುಂದಾಪುರ ಆಸ್ಪತ್ರೆಗೆ ದಾಖಲು
ಬೆಂಗಳೂರು, ಸೆ.15: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉದ್ಯಮಿಯೊಬ್ಬರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ, ಸಂಘ ಪರಿವಾರದ ನಾಯಕಿ ಚೈತ್ರಾ ಕುಂದಾಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂದು ಬೆಳಗ್ಗೆ ವಿಚಾರಣೆಗಾಗಿ ಚೈತ್ರಾರನ್ನು ನಗರದ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಪೊಲೀಸರು ಕರೆತಂದಿದ್ದರು. ಈ ವೇಳೆ ಅಸ್ವಸ್ಥಗೊಂಡ ಚೈತ್ರಾ ಕುಸಿದುಬಿದ್ದರೆನ್ನಲಾಗಿದೆ. ಅವರನ್ನು ತಕ್ಷಣ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬಿಜೆಪಿ ಮುಖಂಡ, ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಂದ ಐದು ಕೋಟಿ ರೂ. ಪಡೆದು ವಂಚಿಸಿರುವ ಬಗ್ಗೆ ಚೈತ್ರಾ ಕುಂದಾಪುರ ಸಹಿತ ಏಳು ಮಂದಿ ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಎ1 ಆರೋಪಿ ಎಂದು ಗುರುತಿಸಲ್ಪಟ್ಟಿರುವ ಚೈತ್ರಾ ಕುಂದಾಪುರರನ್ನು ಮೂರನೇ ದಿನದ ವಿಚಾರಣೆಗಾಗಿ ಇಂದು ಬೆಳಗ್ಗೆ ಸಿಸಿಬಿ ಕಚೇರಿಗೆ ಕರೆತಂದ ವೇಳೆ ಅವರು ಏಕಾಏಕಿ ಕುಸಿದುಬಿದ್ದರು ಎಂದು ತಿಳಿದುಬಂದಿದೆ.