ಕಾಂಗ್ರೆಸ್ ಹಗರಣಗಳ ಕುರಿತು ರಾಹುಲ್ ಗಾಂಧಿ, ಖರ್ಗೆ ಬಾಯಿ ಬಿಡುತ್ತಿಲ್ಲವೇಕೆ? : ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ಹಗರಣಗಳ ಕುರಿತು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ಬಾಯಿ ಬಿಡುತ್ತಿಲ್ಲವೇಕೆ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನೆ ಮಾಡಿದ್ದಾರೆ.
ವಿಧಾನಸೌಧದ 1ನೇ ಮಹಡಿಯ ಕೊಠಡಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ (ಝೀರೊ ಟಾಲರೆನ್ಸ್ ಫಾರ್ ಕರಪ್ಶನ್) ಎಂದು ಹೇಳಿಕೆ ಕೊಟ್ಟ ರಾಹುಲ್ ಗಾಂಧಿಯವರು ಎಲ್ಲಿ ಹೋಗಿದ್ದಾರೆ? ಯಾಕೆ ಕರ್ನಾಟಕದ ಬಗ್ಗೆ ಅವರು ಬಾಯಿ ಬಿಚ್ಚಿಲ್ಲ? ಭ್ರಷ್ಟಾಚಾರಕ್ಕೆ ಅವರ ಅನುಮತಿ ಇದೆಯೇ? ಅಥವಾ ಇಲ್ಲಿನ ವಿಚಾರಗಳು ಅವರ ಗಮನಕ್ಕೆ ಬಂದಿಲ್ಲವೇ" ಎಂದು ಕೇಳಿದರು.
ಇದೇ ರಾಜ್ಯದವರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಬಿಜೆಪಿ ದಲಿತ ಸಮಸ್ಯೆಗಳನ್ನು ಬಿಚ್ಚಿಟ್ಟು ಹಾಗೂ ಹಗರಣಗಳನ್ನು ಮುಂದಿಟ್ಟು ಹೋರಾಡಿದಾಗ ಏನೂ ಅನಿಸಿಲ್ಲವೇ? ಅವರು ಬಾಯಿ ಮುಚ್ಚಿ ಕುಳಿತಿದ್ದೇಕೆ ಎಂದು ಪ್ರಶ್ನಿಸಿದರು.
ಡಿಸಿಎಂ ಉದ್ಧಟತನದ ಮಾತು :ವಿಪಕ್ಷಗಳು ಎಷ್ಟೇ ಬೈದರೂ, ಪತ್ರಕರ್ತರು ಎಷ್ಟೇ ಬೈದರೂ ನೀರಿನ ದರ ಏರಿಸದೆ ಬಿಡುವುದಿಲ್ಲ ಎಂದು ಉದ್ಧಟತನದ ಮಾತುಗಳನ್ನು ಮಾನ್ಯ ಉಪ ಮುಖ್ಯಮಂತ್ರಿಗಳು ಆಡಿದ್ದಾರೆ. ಈ ಸಿಟ್ಟು ನಿಮಗ್ಯಾಕೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.
ಸಿಎಂ, ಡಿಸಿಎಂ ನುಣುಚಿಕೊಳ್ಳುವ ತಂತ್ರ :ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ಅದನ್ನು ಮುಂದುವರೆಸಲಿ. ಅವರನ್ನು ಹೇಗಾದರೂ ಮಾಡಿ ಟ್ರ್ಯಾಪ್ ಮಾಡಲು, ಚರ್ಚೆಗೆ ಎಳೆಯಲು ಕಾಂಗ್ರೆಸ್ ಪಕ್ಷ ತಂತ್ರಗಾರಿಕೆ ಮಾಡುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ದೂರಿದರು.
ಸಿದ್ದರಾಮಯ್ಯನವರು ಮತ್ತು ಡಿ.ಕೆ.ಶಿವಕುಮಾರ್ ಅವರು ತಮಗೆ ಪ್ರತಿದಿನ ಬರುವ ಸಮಸ್ಯೆಗಳಿಂದ ನುಣುಚಿಕೊಳ್ಳಲು ಯೋಚಿಸುತ್ತಾರೆ. ಆಗ ಅವರು ಕುಮಾರಸ್ವಾಮಿಯವರನ್ನು ನೆನಪಿಸಿಕೊಳ್ಳುತ್ತಾರೆ. ಇದರಿಂದಾಗಿ ಹೇಳಿಕೆ- ಪ್ರತಿ ಹೇಳಿಕೆ ಮುಂದುವರೆಯುತ್ತದೆ ಎಂದು ವಿವರಿಸಿದರು.