‘ವಿಧಾನಪರಿಷತ್ ಸದಸ್ಯತ್ವದಿಂದ ಛಲವಾದಿ ನಾರಾಯಣ ಸ್ವಾಮಿಯನ್ನು ಅನರ್ಹಗೊಳಿಸಿ’ : ರಾಜ್ಯಪಾಲರಿಗೆ ಕಾಂಗ್ರೆಸ್ ನಿಯೋಗ ಮನವಿ

Update: 2024-09-03 14:53 GMT

ಬೆಂಗಳೂರು : ಶೈಕ್ಷಣಿಕ ಉದ್ದೇಶಕ್ಕಾಗಿ ಪಡೆದ ಸಿಎ ನಿವೇಶನವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಯನ್ನು ಪರಿಷತ್ ಸದಸ್ಯತ್ವ ಹಾಗೂ ವಿಪಕ್ಷ ನಾಯಕನ ಸ್ಥಾನದಿಂದ ಅನರ್ಹಗೊಳಿಸುವಂತೆ ರಾಜ್ಯಪಾಲರಿಗೆ ಕಾಂಗ್ರೆಸ್ ನಿಯೋಗ ಮನವಿ ಸಲ್ಲಿಸಿದೆ.

ಮಂಗಳವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‍ರನ್ನು ಭೇಟಿ ಮಾಡಿದ ವಿಧಾನಪರಿಷತ್ತಿನ ಸರಕಾರದ ಮುಖ್ಯಸಚೇತಕ ಸಲೀಮ್ ಅಹ್ಮದ್ ನೇತೃತ್ವದ ನಿಯೋಗವು, ಆದರ್ಶ ಶಾಲೆ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಛಲವಾದಿ ನಾರಾಯಣಸ್ವಾಮಿ ಶಿಕ್ಷಣದ ಉದ್ದೇಶಕ್ಕಾಗಿ ಹೊಸಕೋಟೆಯಲ್ಲಿ ಪಡೆದಿರುವ ನಿವೇಶನದಲ್ಲಿ ಈಗ ಆನಂದ್ ಧಮ್ ಬಿರಿಯಾನಿ ಹೋಟೆಲ್ ನಡೆಯುತ್ತಿದೆ ಎಂದು ದೂರಿದೆ.

ರಾಜ್ಯಪಾಲರಿಗೆ ದೂರು ಸಲ್ಲಿಸಿದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಲೀಮ್ ಅಹ್ಮದ್, ಸಿಎ ನಿವೇಶನ ಪಡೆದಿದ್ದ ಅವರು ಶಾಲಾ ಕಟ್ಟಡ ನಿರ್ಮಾಣಕ್ಕೆ ಎಂದು ಅನುಮತಿ ಪಡೆದಿದ್ದರು. 2006ರಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಟೆಲಿಕಮ್ಯೂನಿಕೇಷನ್ ಗಾಗಿ ಎಂದು ನೋಂದಾಯಿಸಿ ಕೊಂಡರು. ಪ್ರಸ್ತುತ ಆ ಜಾಗದಲ್ಲಿ ಆನಂದ್ ಧಮ್ ಬಿರಿಯಾನಿ ಎನ್ನುವ ಹೋಟೆಲ್ ನಡೆಯುತ್ತಿದೆ ಎಂದು ಹೇಳಿದರು.

ಶಿಕ್ಷಣದ ಉದ್ದೇಶಕ್ಕೆ ಪಡೆದ ನಿವೇಶನದಲ್ಲಿ ಧಮ್ ಬಿರಿಯಾನಿ ಹೋಟೆಲ್ ನಡೆಯುತ್ತಿದೆ. ಈ ವಿಚಾರವಾಗಿ ರಾಜ್ಯಪಾಲರನ್ನು ಭೇಟಿ ಮಾಡಿ ಪರಿಷತ್ ವಿರೋಧ ಪಕ್ಷದ ನಾಯಕನ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. ಅವರು ಅಧಿಕಾರಿಗಳನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ಇದರ ಬಗ್ಗೆ ಲೋಕಾಯುಕ್ತಕ್ಕೂ ಮನವಿ ಸಲ್ಲಿಸಿದ್ದೇವೆ ಎಂದು ಸಲೀಮ್ ಅಹ್ಮದ್ ತಿಳಿಸಿದರು.

ರಾಜ್ಯಪಾಲರು ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿದರು. ಇದರ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದಾಗ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಸಲೀಮ್ ಅಹ್ಮದ್ ತಿಳಿಸಿದರು.

ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮಾತನಾಡಿ, ಶಾಲಾ ಕಟ್ಟಡ ನಿರ್ಮಾಣಕ್ಕೆ ಮಾತ್ರ ಬಳಸಬೇಕು ಎಂಬ ಶರತ್ತಿನೊಂದಿಗೆ ಸಿಎ ನಿವೇಶನ ಪಡೆಯಲಾಗಿತ್ತು. ಮುಂದಿನ 5 ವರ್ಷಗಳಲ್ಲಿ ಶಾಲಾ ಕಟ್ಟಡ ನಿರ್ಮಾಣ ಪೂರ್ಣಗೊಳಿಸಬೇಕು ಇಲ್ಲದಿದ್ದರೇ ಮರಳಿ ಪಡೆಯಲಾಗುವುದು ಎಂದು ರಾಜ್ಯ ಗೃಹ ಮಂಡಳಿ ತಿಳಿಸಿತ್ತು ಎಂದರು.

ಆನಂತರ 2006ರ ಜು.28ರಲ್ಲಿ ಕ್ರಯಪತ್ರ ಆಗುವಾಗ ರಾಜ್ಯ ಗೃಹ ಮಂಡಳಿಯ ಸದಸ್ಯರಾಗಿದ್ದ ನಾರಾಯಣಸ್ವಾಮಿ ನಿವೇಶನ ಪಡೆದ ಉದ್ದೇಶ ಬದಲಾವಣೆ ಮಾಡಿದ್ದಾರೆ. ಟೆಲಿ ಕಮ್ಯೂನಿಕೇಶನ್ ಮತ್ತು ಪಬ್ಲಿಕ್ ಸರ್ವೀಸ್ ಎಂದು ಬದಲಾಯಿಸುತ್ತಾರೆ. ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ನಿವೇಶನವನ್ನು ಅಕ್ರಮವಾಗಿ ಉಪಯೋಗಿಸುತ್ತಿದ್ದಾರೆ ಎಂದು ಅವರು ದೂರಿದರು.

ಯಾವುದೇ ಸಂಘ, ಸಂಸ್ಥೆಗಳಿಗೆ ಸಿಎ ನಿವೇಶನ ಮಂಜೂರು ಮಾಡುವಾಗ ಟ್ರಸ್ಟ್ ಡೀಡ್, ಬೈಲಾ ಹಾಗೂ ಮೂರು ವರ್ಷಗಳ ಲೆಕ್ಕಪರಿಶೋಧನೆ ಆಗಿರಬೇಕು. ಇವುಗಳನ್ನು ಯಾವುದೇ ದಾಖಲೆಗಳನ್ನು ನಾರಾಯಣಸ್ವಾಮಿ ಕೊಟ್ಟಿಲ್ಲ. ಮೈಸೂರಿನ ಹೆಬ್ಬಾಳದಲ್ಲಿ ಕೈಗಾರಿಕಾ ನಿವೇಶವನ್ನು ಅಧಿಕಾರ ದುರುಪಯೋಗ ಮಾಡಿಕೊಂಡು ಪಡೆದಿದ್ದಾರೆ. ಭಾರತ ನ್ಯಾಯ ಸಂಹಿತೆ ಸೆಕ್ಷನ್ 316, 318 ಅಡಿ ಮೋಸ ಹಾಗೂ ನಂಬಿಕೆದ್ರೋಹ ಮಾಡಿರುವ ಕಾರಣಕ್ಕೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ರಮೇಶ್ ಬಾಬು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುಧಾಮ ದಾಸ್, ಮಂಜುನಾಥ ಭಂಡಾರಿ, ವಸಂತ ಕುಮಾರ್, ಪುಟ್ಟಣ್ಣ, ದಿನೇಶ್ ಗೂಳಿಗೌಡ, ಜಗದೇವ್ ಗುತ್ತೆದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News