ʼವಾಲ್ಮೀಕಿ ಹಗರಣʼದ ಸತ್ಯಾಂಶವನ್ನು ಮುಚ್ಚಿಡುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ : ಛಲವಾದಿ ನಾರಾಯಣಸ್ವಾಮಿ

Update: 2024-10-10 12:23 GMT

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಹಗರಣಗಳಲ್ಲಿ ಕ್ಲೀನ್‍ಚಿಟ್ ಪಡೆಯಲು ಸಿಟ್, ಸಿಐಡಿಯನ್ನು ನೇಮಿಸುತ್ತದೆ. ಮುಡಾ ನಿವೇಶನ ಹಂಚಿಕೆ ಅಕ್ರಮದ ಮಾದರಿಯಲ್ಲೇ ವಾಲ್ಮೀಕಿ ನಿಗಮದ ಹಗರಣದ ಸತ್ಯಾಂಶವನ್ನು ಮುಚ್ಚಿಡುವ ಕೆಲಸವನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಗುರುವಾರ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾರಿ ನಿರ್ದೇಶನಾಲಯ (ಈಡಿ) ಬರದೆ ಇದ್ದಲ್ಲಿ ವಾಲ್ಮೀಕಿ ನಿಗಮದ ಹಗರಣ ಮುಚ್ಚಿ ಹೋಗುತ್ತಿತ್ತು. ಸಿಬಿಐಗೆ ಹೋದಾಗ, ಅದರಲ್ಲಿ ಹಣಕಾಸು ಅವ್ಯವಹಾರ ಇದೆ ಎಂದು ಗೊತ್ತಾದಾಗ ಈಡಿ ತನಿಖೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.

ಸಿಎಂಗೆ ಆತ್ಮಗೌರವ ಇದ್ದರೆ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ, ಸಂವಿಧಾನದ ಬಗ್ಗೆ ಗೌರವ ಇದ್ದರೆ ಇಷ್ಟೊತ್ತಿಗಾಗಲೇ ಅವರು ರಾಜೀನಾಮೆ ಕೊಡಬೇಕಿತ್ತು ಎಂದ ಅವರು, ಒಂದು ಕೋರ್ಟ್ 14 ಸೈಟ್ ಪಡೆದುದೇ ತಪ್ಪು ಎಂದಿದೆ. ಅಲ್ಲಿ ಜಮೀನೇ ಇಲ್ಲ, ನೀವು ಹೇಗೆ ನಿವೇಶನ ಪಡೆದಿರಿ ಎಂದು ಇನ್ನೊಂದು ಕೋರ್ಟ್ ಹೇಳಿದೆ. ಶೇ.50-50 ಅನುಪಾತದಲ್ಲಿ ಪಡೆಯಲು ಸಾಧ್ಯವಿಲ್ಲ, ಇದೆಲ್ಲವೂ ಬೋಗಸ್ ಎಂದಿದೆ. ಇಷ್ಟೆಲ್ಲ ಆಗಲು, ನಿಮ್ಮ ಹೆಸರಷ್ಟೇ  ಸಾಕು. ನಿಮ್ಮ ಕುಟುಂಬಕ್ಕೆ ಪ್ರಭಾವ ಬಳಸಲು ನಿಮ್ಮ ಹುದ್ದೆಯೇ ಸಾಕು ಎಂದು ವಿಶ್ಲೇಷಿಸಿದರು.

ಈಡಿ ನಿನ್ನೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವರದಿ ಒಪ್ಪಿಸಿದೆ. ಈ ವರದಿಯಲ್ಲಿ ವಾಲ್ಮೀಕಿ ಹಗರಣದಲ್ಲಿ ಬಿ.ನಾಗೇಂದ್ರ ಮಾಸ್ಟರ್ ಮೈಂಡ್ ಎಂದು ತಿಳಿಸಿದೆ. ಸಿಎಂ ಯಾರೋ ಅಧಿಕಾರಿಗಳು ಇದನ್ನು ಮಾಡಿದ್ದಾರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದರು ಎಂದು ಅವರು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News