ಕೇಂದ್ರ ಕೃಷಿ ಸಚಿವರೊಂದಿಗೆ ವಿಡಿಯೋ ಸಂವಾದ | ರಾಜ್ಯದ ಯೋಜನೆಗಳಿಗೆ ಸಹಕಾರ ನೀಡಲು ಚಲುವರಾಯಸ್ವಾಮಿ ಮನವಿ

Update: 2024-06-21 10:32 GMT

ಬೆಂಗಳೂರು : ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ವಿವಿಧ ರಾಜ್ಯಗಳ ಕೃಷಿ ಸಚಿವರೊಂದಿಗೆ ಮುಂಗಾರು ಹಾಗೂ ಕೃಷಿ ಸಂಬಂಧಿಸಿ  ನಡೆಸಿದ ವಿಡಿಯೋ ಸಂವಾದದಲ್ಲಿ‌ ಪಾಲ್ಗೊಂಡ ರಾಜ್ಯ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿಯವರು ರಾಜ್ಯದ ಯೋಜನೆಗಳಿಗೆ ಸಂಪೂರ್ಣ ಸಹಕಾರ ಕೋರಿದರು.

ಇದೇ ವೇಳೆ ಅವರು ರಾಜ್ಯದ ಮಳೆ-ಬೆಳೆ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು‌‌. ಕರ್ನಾಟಕವು ದೇಶದ ದ್ವಿದಳ ಧಾನ್ಯ ಬೆಳೆಯ ಶೇ.11ರಷ್ಟು ಭೂ ಪ್ರದೇಶ ಮತ್ತು ಶೇ.8ರಷ್ಟು ಉತ್ಪಾದನೆ ಹೊಂದಿದೆ. ರಾಜ್ಯದ 31.6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 19.83 ಲಕ್ಷ ಟನ್ ದ್ವಿದಳ ಧಾನ್ಯ ಬೆಳೆಯಲಾಗುತ್ತಿದೆ ಎಂದು ಎನ್.ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ತೊಗರಿ ಬೇಳೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದ್ದು, ಶೇ.31ರಷ್ಟು ಕೊಡುಗೆ ನೀಡುತ್ತಿದೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಎರಡನ್ನೂ ಹೆಚ್ಚಿಸಲು ಕಾರ್ಯತಂತ್ರ ರೂಪಿಸಿ ಅನುಷ್ಠಾನಗೊಳಿಸುತ್ತಿದ್ದು, ಇದರಿಂದ ಬೇಳೆ ಕಾಳುಗಳ ಆಮದು ಅವಲಂಬನೆ ತಪ್ಪಿಸಲು ಸಹಾಯಕವಾಗುತ್ತದೆ ಎಂದು ಸಚಿವರು ಮನವರಿಕೆ ಮಾಡಿಕೊಟ್ಟರು.

ರಾಜ್ಯದ 64.2 ಕೋಟಿ ರೂ. ಮೊತ್ತದ ತೊಗರಿ ಬೇಳೆ ಅಭಿವೃದ್ಧಿಯ ಹೆಚ್ಚುವರಿ ಯೋಜನೆಗೆ ಅನುಮೋದನೆ ನೀಡಿರುವ ಕೇಂದ್ರ ಕೃಷಿ ಸಚಿವರಿಗೆ ಧನ್ಯವಾದ ಸಮರ್ಪಿಸಿದ ಎನ್.ಚಲುವರಾಯಸ್ವಾಮಿ ಅವರು ಶೀಘ್ರದಲ್ಲೇ ವೈಯಕ್ತಿಕವಾಗಿ ಭೇಟಿ ಮಾಡುವುದಾಗಿ ತಿಳಿಸಿ, ಮುಂದೆಯೂ ನಿರಂತರ ಸಹಕಾರಕ್ಕೆ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News