ಚಂದ್ರಯಾನ ಹೋಗಿ ಚಂದ್ರನಿಗೆ ಮುಟ್ಟಿದೆ, ಬಿಜೆಪಿಗರಿಗೆ ಮಾತ್ರ ಇನ್ನೂ ವಿರೋಧ ಪಕ್ಷದ ನಾಯಕ ಯಾರು ಎಂದು ಗೊತ್ತಾಗಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ

Update: 2023-08-29 14:57 GMT

ಕಲಬುರಗಿ, ಆ.29: ಬಿಜೆಪಿಯವರಿಗೆ ಬಹುಶಃ ಏನು ಮಾಡಬೇಕು ಎನ್ನುವುದೆ ಅರ್ಥ ಆಗುತ್ತಿಲ್ಲ. ಅವರು ಅಧಿಕಾರ ಕಳೆದುಕೊಂಡು ನೂರು ದಿನ ಆಗಿದೆ. ಆದರೆ, ನಾವು ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುತ್ತಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಯಾನ ಚಂದ್ರನಿಗೆ ಮುಟ್ಟಿದೆ. ಆದರೆ, ವಿರೋಧ ಪಕ್ಷದ ನಾಯಕ ಯಾರು ಎಂದು ಅದು ಬಿಜೆಪಿಗರಿಗೆ ಗೊತ್ತಾಗುತ್ತಿಲ್ಲ. ಅವರ ಪಕ್ಷದಲ್ಲಿ ಏನು ಆಗುತ್ತಿದೆ ಎಂದು ಅವರಿಗೆ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಒಳ್ಳೆಯ ಆಡಳಿತ ಕೊಡಬೇಕು ಎನ್ನುವ ಉದ್ದೇಶದಿಂದ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರಕಾರವನ್ನು ಟೀಕಿಸುವ ನೈತಿಕತೆ ಬಿಜೆಪಿ ನಾಯಕರಿಗೆ ಇಲ್ಲ. ಬಿಜೆಪಿಯವರು ಹತಾಶರಾಗಿದ್ದಾರೆ. ಅಧಿಕಾರ ಇಲ್ಲದೆ ಇರುವುದಕ್ಕೆ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸುತ್ತಿದ್ದಾರೆ. ಮೊನ್ನೆ ಮೋದಿ ಬೆಂಗಳೂರಿಗೆ ಬಂದಾಗ ಬಿಜೆಪಿ ನಾಯಕರು ಬ್ಯಾರಿಕೇಡ್ ಹಿಂದೆ ಬಂಧಿ ಆಗಿ ಕನ್ನಡಿಗರ ಮಾರ್ಯಾದೆ ಬೀದಿಗೆ ತಂದಿದ್ದರು ಎಂದು ಅವರು ಟೀಕಿಸಿದರು.

ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಏನೆ ಹೇಳಿದರು ದಾಖಲೆ ಕೊಡಿ ಎನ್ನುತ್ತಿದ್ದರು. ಈಗ ಬೊಮ್ಮಾಯಿ ಮಾಡುತ್ತಿರುವ ಆರೋಪಕ್ಕೆ ಯಾವ ದಾಖಲೆಗಳಿವೆ ? ಅವರು ಹತಾಶರಾಗಿ ಆರೋಪ ಮಾಡುತ್ತಿದ್ದಾರೆ. ಹಾಗೆ ಆರೋಪ ಮಾಡುವುದರಿಂದ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಬಹುದು ಎಂದು ಭಾವಿಸಿದಂತಿದೆ ಎಂದು ಪ್ರಿಯಾಂಕ್ ಖರ್ಗೆ ಕುಟುಕಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷರು ನಮ್ಮ ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ಬಿಲ್ ಪಾವತಿಗೆ ವಿಳಂಬವಾಗುತ್ತಿದೆ ಎಂದಿದ್ದಾರೆ. ಥರ್ಡ್ ಪಾರ್ಟಿ ಪರಿಶೀಲನೆ ವರದಿ ನಂತರ ಬಾಕಿ ಇರುವ ಬಿಲ್ ಗಳನ್ನು ಪಾವತಿ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಶಾಸಕ ಎನ್.ರವಿಕುಮಾರ್ ಜೇವರ್ಗಿಯಲ್ಲಿ ತಮ್ಮ ಪಕ್ಷದ ಟಿಕೆಟ್ ಮಾರಿಕೊಂಡಿದ್ದಾರೆ ಎಂದು ಸ್ವತಃ ಅವರ ಪಕ್ಷದವರೆ ಹೇಳುತ್ತಿದ್ದರು. ಅದಾದ ಮೇಲೆ ಅವರು ಕಲಬುರಗಿಗೆ ಬಂದೆ ಇರಲಿಲ್ಲ. ಆದರೆ ನಿನ್ನೆ ಚಿತ್ತಾಪುರಕ್ಕೆ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅವರ ಶಿಷ್ಯನಿಗೆ ಗಡಿಪಾರು ಶಿಕ್ಷೆ ವಿಧಿಸಿದಾಗ ರವಿಕುಮಾರ್ ಯಾಕೆ ಬಂದು ಪ್ರತಿಭಟನೆ ಮಾಡಲಿಲ್ಲ? ಇದು ಬಿಜೆಪಿ ಸರಕಾರದ ಕಲಬುರಗಿ ಅಲ್ಲ, ಕಾಂಗ್ರೆಸ್ ಸರಕಾರದ ಕಲಬುರಗಿ. ನಿಮ್ಮ ಶಿಷ್ಯ ಅಷ್ಟೇ ಅಲ್ಲ, ನೀವು ತಪ್ಪು ಮಾಡಿದರೂ ನಿಮ್ಮ ಮೇಲೂ ಕಾನೂನು ಕ್ರಮ ಆಗುತ್ತದೆ ಎಂದು ಅವರು ಎಚ್ಚರಿಸಿದರು.

ಆಂದೋಲಾ ಸಿದ್ದಲಿಂಗ ಸ್ವಾಮಿ ವಿರುದ್ದ ಹರಿಹಾಯ್ದ ಪ್ರಿಯಾಂಕ್ ಖರ್ಗೆ, ನಿಮ್ಮದು ಎಂತಹ ತತ್ವ ? ಅಕ್ಕಿ ಕಳ್ಳರಿಗೆ, ಅಂಗನವಾಡಿ ಮಕ್ಕಳ ಹಾಲಿನ ಪೌಡರ್ ಕಳ್ಳತನ ಮಾಡುವವರ ರಕ್ಷಣೆ ಮಾಡಿ ಅಂತ ನಿಮ್ಮ ತತ್ವ ಹೇಳುತ್ತಾ ? ಎಂದು ಪ್ರಶ್ನಿಸಿದರು.

ಬಿಜೆಪಿ ಸರಕಾರ ಇದ್ದಾಗ ಅಕ್ಕಿ ಹಾಗೂ ಹಾಲಿನಪುಡಿ ಕಳ್ಳತನ ಮಾಡಿರುವ ಆರೋಪ ಹೊತ್ತಿರುವವರಿಗೆ ಟಿಕೇಟ್ ನೀಡಲಾಗಿತ್ತು. ಆದರೆ, ನಮ್ಮ ಸರಕಾರ ಬಂದ ಮೇಲೆ ಅಂತವರನ್ನ ಜೈಲಿಗೆ ಕಳುಹಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News