ಚನ್ನಮ್ಮ, ಟಿಪ್ಪು ಸುಲ್ತಾನ್ ಸ್ವಾಭಿಮಾನಿ ಹೋರಾಟದ ಸ್ಫೂರ್ತಿ: ಸಿಎಂ ಸಿದ್ದರಾಮಯ್ಯ

Update: 2023-10-13 12:16 GMT

ಬೆಂಗಳೂರು, ಅ.13: ನಮ್ಮ ನಾಡಿನ ಕಿತ್ತೂರು ರಾಣಿ ಚನ್ನಮ್ಮ, ಟಿಪ್ಪು ಸುಲ್ತಾನ್ ಸ್ವಾಭಿಮಾನಿ ಹೋರಾಟದ ಸ್ಫೂರ್ತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ಶುಕ್ರವಾರ ವಿಧಾನಸೌಧ ಮುಂಭಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಉತ್ಸವ-2023ರ ನಿಮಿತ್ತ ವೀರ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಿತ್ತೂರು ಚನ್ನಮ್ಮ ತನ್ನ ಸಣ್ಣ ಸೈನ್ಯದಿಂದ ಬ್ರಿಟಿಷರ ಬೃಹತ್ ಸೈನ್ಯಕ್ಕೆ ಸೆಡ್ಡು ಹೊಡೆದ ಧೀಮಂತ ರಾಣಿ. ಈಕೆಯ ಧೈರ್ಯ ಮತ್ತು ಆದರ್ಶ ಯುವ ಸಮೂಹವನ್ನು, ಇವತ್ತಿನ ಪೀಳಿಗೆಯನ್ನು ತಲುಪಬೇಕು ಎನ್ನುವ ಕಾರಣಕ್ಕೇ ನಾನು ಮೊದಲ ಬಾರಿ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಕಿತ್ತೂರು ಉತ್ಸವ ಮತ್ತು ಜಯಂತ್ಸೋವವನ್ನು ಆರಂಭಿಸಿದೆ ಎಂದು ಹೇಳಿದರು.

ಸ್ವಾಭಿಮಾನವನ್ನು ಜೀವನದಲ್ಲಿ ಪ್ರತಿಯೊಬ್ಬರು ಬೆಳಸಿಕೊಳ್ಳಬೇಕು. ಅಕ್ಟೋಬರ್ 23, 24 ಹಾಗೂ 25 ರಂದು ಬೆಳಗಾವಿ ಜಿಲ್ಲೆಯಲ್ಲಿ ಕಿತ್ತೂರಿನಲ್ಲಿ ಚನ್ನಮ್ಮ ಕಿತ್ತೂರು ಉತ್ಸವ ಆಚರಿಸಲಾಗುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿ, ಶಾಸಕರಾದ ಬಾಬಾಸಾಹೇಬ ಪಾಟೀಲ್, ವಿನಯ್ ಕುಲಕರ್ಣಿ, ಮಹಂತೇಶ ಕೌಜಲಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News