ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಚಾರ್ಜ್ ಶೀಟ್ ಸಿದ್ಧ, ಶೀಘ್ರದಲ್ಲಿ ಸಲ್ಲಿಕೆ : ಮೂಲಗಳು

Update: 2024-01-05 12:34 GMT

ಶ್ರೀರಂಗಪಟ್ಟಣ: ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆ ಶ್ರೀರಂಗಪಟ್ಟಣ 3 ನೇ ಅಪರ ಜಿಲ್ಲಾ ಸೆಶನ್ ನ್ಯಾಯಾಲಯದಲ್ಲಿ ನಡೆಯಿತು. ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ಗೆ ನೀಡಿರುವ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರ ಪರ ಹಿರಿಯ ವಕೀಲ ಎಸ್ ಬಾಲನ್ ವಾದ ಮಂಡಿಸಿದರು‌.

"ಪ್ರಭಾಕರ ಭಟ್ ಈ ರೀತಿ ಕೃತ್ಯಗಳ ಚಾಳಿ ಹೊಂದಿದ್ದಾನೆ. ದ್ವೇಷ ಭಾಷಣ ಎನ್ನುವುದು ದೇಶ ಒಡೆಯುವ ಕೃತ್ಯ ಎಂದು ಸುಪ್ರಿಂ ಕೋರ್ಟ್ 2021 ಅಕ್ಟೋಬರ್ 21 ರ ಆದೇಶದಲ್ಲಿ ಹೇಳಿದೆ. ಹಾಗಾಗಿ ಇದು ದೇಶದ್ರೋಹದ ಕೃತ್ಯ" ಎಂದು ಪ್ರಾಥಮಿಕ ವಾದ ಮಂಡಿಸಿದರು.

ಈ ಸಂದರ್ಭದಲ್ಲಿ ಪ್ರಭಾಕರ ಭಟ್ ವಿರುದ್ಧ ಚಾರ್ಚ್ ಶೀಟ್ ಸಿದ್ಧವಾಗಿದೆ. ನ್ಯಾಯಾಲಯಕ್ಕೆ ಅದನ್ನು ಸಲ್ಲಿಸಲಾಗುವುದು ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು ಎಂದು ತಿಳಿದು ಬಂದಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಪರವಾಗಿ ಹಿರಿಯ ವಕೀಲರು ಹಾಜರಾಗದೇ ಇದ್ದುದರಿಂದ, ಕಿರಿಯ ವಕೀಲರು ಸಮಯ ಕೇಳಿದರು.

"ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದರೆ ಕಲ್ಲಡ್ಕ ಪ್ರಭಾಕರ್ ಭಟ್ ಮಧ್ಯಂತರ ಜಾಮೀನು ತಕ್ಷಣ ರದ್ದು ಮಾಡಬೇಕು. ದೇಶಕ್ಕಿಂತ ಮಿಗಿಲು ಯಾರೂ ಇಲ್ಲ. ಸುಪ್ರಿಂ ಕೋರ್ಟ್ ದ್ವೇಷ ಭಾಷಣದ ಬಗ್ಗೆ ಆದೇಶ ನೀಡಿದ್ದು ಮಾತ್ರವಲ್ಲ, ತೀಕ್ಷ್ಣವಾದ ಸೂಚನೆಗಳನ್ನು ಎಲ್ಲಾ ರಾಜ್ಯಗಳಿಗೆ ನೀಡಿದೆ" ಎಂದು ಬಾಲನ್ ವಾದ ಮಂಡಿಸಿದರು.

ವಿಚಾರಣೆಯನ್ನು ಜನವರಿ 10 ಕ್ಕೆ ಮುಂದೂಡಿದ್ದು, ಅಂದು ಸಂಜೆ 4 ಗಂಟೆಗೆ ವಿಸ್ತೃತ ವಾದ ನಡೆಯಲಿದೆ‌ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News