ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಅಗತ್ಯ ನೆರವು : ಸಿದ್ದರಾಮಯ್ಯ

Update: 2024-11-20 15:20 GMT

ಬೆಂಗಳೂರು : ಕರ್ನಾಟಕ ದೇಶದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದ್ದು, ಇಲ್ಲಿನ ಉದ್ಯಮಸ್ನೇಹಿ ವಾತಾವರಣ, ಪ್ರತಿಭೆಗಳನ್ನು ಬಳಸಿಕೊಂಡು ಬಂಡವಾಳ ಹೂಡಿಕೆ ಮಾಡಲು ಎಲ್ಲ ರೀತಿಯ ನೆರವು ಒದಗಿಸಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿಯಾದ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಲಿಂಡೆ ಕ್ಯಾಮರೂನ್ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಅವರು ಸಮಾಲೋಚನೆ ನಡೆಸಿದರು.

ಉದ್ಯಮಗಳಿಗೆ ಬೆಂಗಳೂರಿನಲ್ಲಿ ವಿಪುಲ ಅವಕಾಶಗಳಿದ್ದು, ಮುಂದಿನ ಫೆಬ್ರವರಿ ತಿಂಗಳಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಇಲ್ಲಿ ನಡೆಯಲಿದೆ. ಸರಕಾರದ ಮಹತ್ವಾಕಾಂಕ್ಷೆಯ ‘ಕ್ವಿನ್ ಸಿಟಿ’ ಯೋಜನೆಯಡಿ ಸಹ ಅವಕಾಶಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ನಮ್ಮ ರಾಜ್ಯದ ಕೈಗಾರಿಕಾ ನೀತಿಯು ಅತ್ಯಂತ ಪ್ರಗತಿಶೀಲವಾಗಿದೆ. ರಾಜ್ಯದ ಬಹುತೇಕ ನಗರಗಳಿಗೆ ಉತ್ತಮ ವಿಮಾನ ಯಾನ ಸಂಪರ್ಕವಿದ್ದು, ಇಂತಹ ಎರಡನೇ ಹಂತದ ನಗರಗಳಲ್ಲಿ ಬಂಡವಾಳ ತೊಡಗಿಸಲು ಸರಕಾರ ಎಲ್ಲ ನೆರವು ಒದಗಿಸಲಿದೆ ಎಂದು ಅವರು ಹೇಳಿದರು.

ಹೈಕಮಿಷನರ್ ಲಿಂಡೆ ಕ್ಯಾಮರೂನ್ ಮಾತನಾಡಿ, ಬೆಂಗಳೂರಿನಲ್ಲಿ ಹಲವು ಬ್ರಿಟಿಷ್‌ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ 15 ಬ್ರಿಟಿಷ್‌ ಕಂಪೆನಿಗಳು ಭಾಗವಹಿಸುತ್ತಿವೆ. ಫೆಬ್ರವರಿಯಲ್ಲಿ ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮತ್ತು ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ಬ್ರಿಟನ್‍ನ ಹಲವು ನಿಯೋಗಗಳು ಭಾಗವಹಿಸಲಿವೆ ಎಂದರು.

ಪ್ರಸಕ್ತ ಕರ್ನಾಟಕದ ಸರಕಾರಿ ಕಾಲೇಜುಗಳ 30 ವಿದ್ಯಾರ್ಥಿಗಳು 15 ದಿನಗಳ ಅಕಾಡೆಮಿಕ್ ಅಧ್ಯಯನದ ಮೇಲೆ ಲಂಡನ್‍ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಬ್ರಿಟಿಷ್‌ ಹೈಕಮಿಷನ್ ಮತ್ತು ಕರ್ನಾಟಕ ಜಂಟಿ ಸಹಭಾಗಿತ್ವದಲ್ಲಿ ಸ್ಕಾಲರ್‍ಶಿಪ್ ಒದಗಿಸುವ ಪರಸ್ಪರ ಒಡಂಬಡಿಕೆ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಇದರನ್ವಯ ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಸರಕಾರಿ ಕಾಲೇಜುಗಳಲ್ಲಿ ಪದವಿ ಪಡೆದ ಹೆಣ್ಣು ಮಕ್ಕಳಿಗೆ ಯುಕೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸ್ಕಾಲರ್‍ಶಿಪ್ ಒದಗಿಸಲಾಗುವುದು. ಮೂರು ವರ್ಷಗಳ ಒಡಂಬಡಿಕೆ ಇದಾಗಿದ್ದು, ಈ ವರ್ಷ 15 ಮಂದಿಗೆ ಸ್ಕಾಲರ್‍ಶಿಪ್ ಒದಗಿಸಲಾಗುವುದು ಎಂದು ಲಿಂಡೆ ಕ್ಯಾಮರೂನ್ ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹ್ಮದ್, ಗೋವಿಂದರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News