ಚಿಕ್ಕಮಗಳೂರು: ಕೊನೆಗೂ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ವರಸಿದ್ದಿ ವೇಣುಗೋಪಾಲ್

Update: 2023-10-05 16:03 GMT

ವರಸಿದ್ದಿ ವೇಣುಗೋಪಾಲ್

ಚಿಕ್ಕಮಗಳೂರು, ಅ.5: ಕಳೆದ ನಾಲ್ಕು ತಿಂಗಳಿನಿಂದ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದಲ್ಲಿ ಬಿಜೆಪಿ ನಗರಸಭೆ ಸದಸ್ಯರು ಹಾಗೂ ಅಧ್ಯಕ್ಷರ ನಡುವೆ ನಡೆಯುತ್ತಿದ್ದ ಜಟಾಪಟಿಗೆ ತೆರೆ ಬಿದಿದ್ದು, ಕೊನೆಗೂ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ವರಸಿದ್ದಿ ವೇಣುಗೋಪಾಲ್ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ಪಕ್ಷದ ಆಂತರಿಕ ಒಪ್ಪಂದದ ಪ್ರಕಾರ ಒಂದು ವರ್ಷದ ಅವಧಿಯನ್ನು ವೇಣುಗೋಪಾಲ್ ಅವರಿಗೆ ಬಿಟ್ಟು ಕೊಡಲಾಗಿತ್ತು. ಆ ಪ್ರಕಾರ ಕಳೆದ 4 ತಿಂಗಳುಗಳ ಹಿಂದೆ ಅವರು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನೂ ಸಲ್ಲಿಸಿದ್ದರು. ಆದರೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಧ್ಯಕ್ಷರ ಬದಲಾವಣೆ ಬೇಡ ಎನ್ನುವ ಕಾರಣಕ್ಕೆ ಪಕ್ಷ ಅವರ ರಾಜೀನಾಮೆಯನ್ನು ಹಿಂಪಡೆಯಲು ಸೂಚಿಸಿತ್ತು. ಅದರಂತೆ ವೇಣುಗೋಪಾಲ್ ರಾಜೀನಾಮೆಯನ್ನು ಹಿಂಪಡೆದಿದ್ದರು.

ಚುನಾವಣೆ ಮುಗಿದ ಕೂಡಲೇ ರಾಜೀನಾಮೆ ನೀಡುವುದಾಗಿ ತಿಳಿಸಿದ್ದ ವೇಣುಗೋಪಾಲ್ ನಂತರ ರಾಜೀನಾಮೆ ನೀಡಿರಲಿಲ್ಲ. ಮಾಜಿ ಶಾಸಕ ಸಿ.ಟಿ.ರವಿ ಸೇರಿದಂತೆ ಬಹುತೇಕ ಬಿಜೆಪಿ ಸದಸ್ಯರು ರಾಜೀನಾಮೆ ನೀಡುವಂತೆ ಒತ್ತಡ ಹೇರಿದರೂ ಅದಕ್ಕೆ ಒಪ್ಪಿರಲಿಲ್ಲ. ಈ ಬಗ್ಗೆ ಪಕ್ಷದಲ್ಲೇ ಅಸಮಾಧನವೂ ವ್ಯಕ್ತವಾಗಿತ್ತು. ನಂತರ ಮಂಗಳವಾರ ನಡೆದ ನಗರಸಭೆ ವಿಶೇಷ ಅಧಿವೇಶನದ ಸಂದರ್ಭದಲ್ಲಿ ಅಧ್ಯಕ್ಷರ ರಾಜೀನಾಮೆ ವಿಚಾರದಲ್ಲಿ ಮತ್ತೆ ಅಸಮಾಧಾನ ಸ್ಫೋಟಗೊಂಡಿತ್ತು. ಅದೇ ಸಂದರ್ಭದಲ್ಲಿ ಅವರ ಮೇಲೆ ರಾಜೀನಾಮೆಗೆ ತೀವ್ರ ಒತ್ತಡವನ್ನೂ ಹೇರಲಾಗಿತ್ತು ಎಂದು ತಿಳಿದು ಬಂದಿದ್ದು, ಈ ಎಲ್ಲಾ ಹಿನ್ನೆಲೆಯಲ್ಲಿ ವೇಣುಗೋಪಾಲ್ ಜಿಲ್ಲಾಧಿಕಾರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.

ಮುಂದಿನ ಕೆಲ ದಿನಗಳಲ್ಲಿ ಅವರು ರಾಜೀನಾಮೆ ಹಿಂಪಡೆಯದಿದ್ದಲ್ಲಿ ರಾಜೀನಾಮೆ ಅಂಗೀಕಾರಗೊಳ್ಳಲಿದ್ದು, ನಗರಸಭೆಯ ಮುಂದಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News