ಬೆಂಗಳೂರು: ಇಸ್ರೋ ವಿಜ್ಞಾನಿಗಳ ಸಾಧನೆ ಕಣ್ತುಂಬಿಕೊಂಡ ಮಕ್ಕಳು, ಸಾರ್ವಜನಿಕರು

Update: 2023-08-23 15:00 GMT

ಬೆಂಗಳೂರು, ಆ. 23: ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ಜಮಾಯಿಸಿದ್ದ ಮಕ್ಕಳು ಮತ್ತು ಸಾರ್ವಜನಿಕರ ಜೊತೆಯಲ್ಲಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ-3ರ ‘ವಿಕ್ರಮ್ ಲ್ಯಾಂಡರ್’ ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ವಿಜ್ಞಾನದ ಮೈಲುಗಲ್ಲನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಕಣ್ತುಂಬಿಕೊಂಡರು.

ಬುಧವಾರ ಇಲ್ಲಿನ ಚಾಲುಕ್ಯ ವೃತ್ತದ ಬಳಿಯಲ್ಲಿನ ನೆಹರೂ ತಾರಾಲಯದಲ್ಲಿ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಪಾದಾರ್ಪಣೆ ಮಾಡುವ ಕ್ಷಣಗಳನ್ನ ದೊಡ್ಡ ಪರದೆಯ ಮೇಲೆ ನೇರ ಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಂಗಳೂರು ನಗರದ ನೆಹರು ತಾರಾಲಯ, ಮಂಗಳೂರಿನ ಪಿಲಿಕುಳ ವಿಜ್ಞಾನ ಕೇಂದ್ರ ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಿದ್ದತೆಗಳನ್ನು ಮಾಡಲಾಗಿತ್ತು. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲೂ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು.

ಇಲ್ಲಿನ ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ನೇರ ಪ್ರಸಾರವನ್ನು ಹಾಗೂ ಚಂದ್ರನ ಛಾಯಾಚಿತ್ರಗಳ ಪ್ರದರ್ಶನವನ್ನು ವೀಕ್ಷಿಸಲು ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಮಾಯಿಸಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಬೋಸರಾಜು ಅವರು ವಿದ್ಯಾರ್ಥಿಗಳು ಮತ್ತು ಮಕ್ಕಳೊಂದಿಗೆ ಬೆರೆತು ವಿಜ್ಞಾನದ ಕೌತುಕ ವೀಕ್ಷಿಸಿದ್ದು ವಿಶೇಷವಾಗಿತ್ತು.

ವೈಜ್ಞಾನಿಕ ಆಸಕ್ತಿಯನ್ನು ಹೆಚ್ಚಿಸಲು ಯೋಜನೆ: ‘ರಾಜ್ಯದಲ್ಲಿ ಎರಡು ಪ್ರಾದೇಶಿಕ ವಿಜ್ಞಾನ ಕೇಂದ್ರಗಳು, 2 ತಾರಾಲಯಗಳು, 8 ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳಿವೆ. 11ಸಂಚಾರಿ ತಾರಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದ ವಿದ್ಯಾರ್ಥಿಗಳಲ್ಲಿ ಬಾಲ್ಯಾವಸ್ಥೆಯಿಂದಲೇ ವೈಜ್ಞಾನಿಕ ವಿಷಯಗಳಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ನೂತನ ಯೋಜನೆಯೊಂದನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ.

ಈ ಯೋಜನೆಯ ಅಡಿಯಲ್ಲಿ ಸರಕಾರಿ ಪ್ರೌಢಶಾಲೆಗಳಲ್ಲಿ ಟೆಲಿಸ್ಕೋಪ್ ಮತ್ತು ಮೈಕ್ರೋಸ್ಕೋಪ್‍ಗಳನ್ನು ನೀಡಲು, ಹಾಗೆಯೇ, ಈ ಉಪಕರಣಗಳ ನಿರ್ವಹಣೆ ಮತ್ತು ಅವುಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಶಿಕ್ಷಕರುಗಳಿಗೆ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ಎನ್.ಎಸ್. ಬೋಸರಾಜು ತಿಳಿಸಿದರು.

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News