ಚಿತ್ರದುರ್ಗ | ಕಲುಷಿತ ನೀರು ಸೇವನೆ ಪ್ರಕರಣ: ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

Update: 2023-08-02 14:27 GMT

ಸಾಂದರ್ಭಿಕ ಚಿತ್ರ

ಚಿತ್ರದುರ್ಗ, ಆ.2: ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ದಾವಣಗೆರೆಯ ಎಸ್.ಎಸ್. ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಬುಧವಾರ ವರದಿಯಾಗಿದೆ.

ಚಿತ್ರದುರ್ಗ ತಾಲೂಕಿನ ವಡ್ಡರಸಿದ್ದವ್ವನಹಳ್ಳಿಯ ಪ್ರವೀಣ್ (25) ಮೃತ ಯುವಕ. ಇವರು ರವಿವಾರ ಕವಾಡಿಗರಹಟ್ಟಿಯ ಸಂಬಧಿಕರ ಮನೆಗೆ ಬಂದಿದ್ದು, ಸೋಮವಾರ ಊರಿಗೆ ಮರಳಿದ್ದರು. ಬಳಿಕ ಪ್ರವೀಣ್ ತೀವ್ರವಾಗಿ ಅಸ್ವಸ್ಥರಾಗಿದ್ದು, ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕಲುಷಿತ ನೀರಿಗೆ ಸಂಬಂಧಿಸಿದಂತೆ ಈಗಾಗಲೇ ನೀರಿನ ಗುಣಮಟ್ಟದ ಬಗ್ಗೆ ತನಿಖೆಗೆ ಒಳಪಡಿಸಲಾಗಿದೆ. ಹಾಗೆಯೇ ಮೃತರ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿದೆ. ಈ ಎರಡೂ ವರದಿಗಳು ಬಂದ ನಂತರ ನಿಖರ ಕಾರಣ ಏನೆಂದು ಗೊತ್ತಾಗಲಿದೆ.

ದಿವ್ಯಾಪ್ರಭು, ಜಿಲ್ಲಾಧಿಕಾರಿ

ಜಿಲ್ಲಾಡಳಿತದಿಂದ ಮಾಹಿತಿ ಪಡೆದ ಸಿಎಂ: ತನಿಖೆಗೆ ಸೂಚನೆ

ಘಟನೆ ಕುರಿತು ಮುಖ್ಯಮಂತ್ರಿಯವರು ಜಿಲ್ಲಾಡಳಿತದಿಂದ ಮಾಹಿತಿ ಪಡೆದಿದ್ದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ, ಘಟನೆಗೆ ಸಂಬಂಧಿಸಿದಂತೆ ತನಿಖಾ ತಂಡ ರಚಿಸಲಾಗಿದೆ. ನಗರಾಭಿವೃದ್ಧಿ ಕೋಶದ ಅಧಿಕಾರಿಯವರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಸಿಎಂ ಸೂಚಿಸಿದ್ದು, ಮೂರು ದಿನಗಳೊಳಗಾಗಿ ವರದಿ ನೀಡುವಂತೆ ಕಾಲಮಿತಿ ನಿಗದಿ ಪಡಿಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಲುಷಿತ ನೀರು ಕುಡಿದು ಮೃತಪಟ್ಟವರು ಮತ್ತು ಅಸ್ವಸ್ಥರಾಗಿರುವವರ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪೂರ್ಣ ತನಿಖೆ ನಡೆಸಿ ಲೋಪವೆಸಗಿರುವ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದರು. ಅವರ ಮೌಖಿಕ ಆದೇಶದಂತೆ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವೈದ್ಯಾಧಿಕಾರಿಗಳು ಸೇರಿ ಅನೇಕ ಜನ ಅಧಿಕಾರಿಗಳು ತನಿಖಾ ತಂಡದಲ್ಲಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದು, ನಗರ ಮತ್ತು ಸುತ್ತಮುತ್ತಲು ಭಾಗದ ಓವರ್ ಹೆಡ್‌ಟ್ಯಾಂಕ್‌ಗಳನ್ನು ಸ್ವಚ್ಛ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News