ದೇಶದಲ್ಲಿರುವ ದ್ವೇಷದ ಮೋಡಗಳು ಶೀಘ್ರದಲ್ಲಿಯೇ ದೂರ: ಫಾರೂಕ್ ಅಬ್ದುಲ್ಲಾ

Update: 2023-08-27 18:18 GMT

ಫಾರೂಕ್ ಅಬ್ದುಲ್ಲಾ | PHOTO: PTI 

ಬೆಂಗಳೂರು: ‘ದೇಶದಲ್ಲಿ ಆವರಿಸಿಕೊಂಡಿರುವ ಅಸಹಿಷ್ಣುತೆ ಹಾಗೂ ದ್ವೇಷದ ವಾತಾವರಣ ಮಾದರಿಯ ಮೋಡಗಳು ಶೀಘ್ರದಲ್ಲಿಯೇ ದೂರಗೊಳ್ಳಲಿವೆ’ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ರವಿವಾರ ನಗರದ ಸೆಂಟ್ ಜೋಸೆಫ್ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ‘ವೈವಿಧ್ಯತೆ ಮತ್ತು ಐಕ್ಯತೆ’ ವಿಷಯಾಧಾರಿತವಾಗಿ ಏರ್ಪಡಿಸಿದ್ದ 31ನೆ ವರ್ಷದ ‘ಹುಸೇನ್ ಡೇ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಸರ್ವಾಧಿಕಾರದ ದಿಕ್ಕಿನತ್ತ ಕೆಲವರು ಕಾಲಿಡುತ್ತಿದ್ದಾರೆ. ಸರ್ವಾಧಿಕಾರದ ಜತೆಗೆ ಕೋಮುವಾದದ ಕಿಡಿ ದೇಶವನ್ನೆ ಭಸ್ಮಮಾಡಲು ಮುಂದಾಗಿವೆ. ಒಂದು ವೇಳೆ ಪ್ರಜಾಪ್ರಭುತ್ವವಾದಿಗಳು ಮೌನ ವಹಿಸಿದರೆ ಕೋಮುವಾದಿಗಳ ದಾರಿ ಸುಗಮವಾಗಿ ಬಿಡುತ್ತದೆ. ಆದುದರಿಂದ ಹೋರಾಟ ಮುಂದುವರೆಸಬೇಕಾಗಿದೆ’ ಎಂದು ಸಲಹೆ ನೀಡಿದರು.

ದ್ವೇಷದ ವಾತಾವರಣಕ್ಕೆ ಕರ್ನಾಟಕದ ಜನರು ಸೂಕ್ತ ಉತ್ತರ ನೀಡಿದ್ದಾರೆ. ಇದು ಕಾಂಗ್ರೆಸ್ ವಿಜಯ ಮಾತ್ರವಲ್ಲ, ಇಲ್ಲಿ ಆರಂಭಗೊಂಡಿರುವ ಸಣ್ಣ ಕಿಡಿಯೂ ದೇಶದಲ್ಲಿರುವ ದ್ವೇಷವನ್ನು ಅಳಿಸಿ ಹಾಕಲಿದೆ ಎಂದ ಅವರು, ನಾವು ಯಾರಿಗೂ ಹೆದರುವ ಅಗತ್ಯತೆ ಇಲ್ಲ. ಇಸ್ಲಾಮ್ ಎನ್ನುವುದೇ ಮಾನವೀಯ ಧರ್ಮ ಉಳಿಸುವ ಹೋರಾಟ ಆಗಿದೆ.ಹೀಗಾಗಿ, ಅನ್ಯಾಯದ ವಿರುದ್ಧ ನಾವು ಸದಾ ಧ್ವನಿಗೂಡಿಸಬೇಕು. ಅನಗತ್ಯ ವಿಚಾರಗಳ ಹಿಂದೆ ಬಿದ್ದು, ನಮ್ಮ ಅಮೂಲ್ಯವಾದ ಸಮಯ ಕಳೆಯಬಾರದು ಎಂದು ಹೇಳಿದರು.

ಜಗತ್ತಿನಲ್ಲಿರುವ ಯಾವುದೇ ಧರ್ಮವೂ ಕೆಟ್ಟ ವಿಚಾರಗಳನ್ನು ಅಳವಡಿಸಿಕೊಳ್ಳಿ ಎಂದು ಹೇಳಿಲ್ಲ. ಅನ್ಯಾಯದ ವಿಷಯಗಳನ್ನು ಬೋಧನೆ ಮಾಡಿಲ್ಲ. ಆದರೂ, ಕೆಲವರು ತಮ್ಮ ಲಾಭಕ್ಕಾಗಿ ಜನರನ್ನು ಎತ್ತಿಕಟ್ಟಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಇಂತಹ ಗುಂಪುಗಳಿಂದ ನಾವು ಎಚ್ಚರವಹಿಸಬೇಕು. ನ್ಯಾಯ ಮತ್ತು ಸತ್ಯದ ಪರ ಜೀವಂತವಾಗಿ ಇರಲು ಹೋರಾಟ ನಡೆಸಬೇಕಾಗಿದೆ ಎಂದು ಫಾರೂಕ್ ಅಬ್ದುಲ್ಲಾ ನುಡಿದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ವೈವಿಧ್ಯತೆ ಹಾಗೂ ಐಕತ್ಯೆಗಾಗಿ ಪ್ರತಿಯೊಬ್ಬರು ಹೋರಾಟ ನಡೆಸಬೇಕು. ಜೊತೆ ಜೊತೆಗೆ ಮುಸ್ಲಿಮ್ ಸಮುದಾಯವೂ ತಮ್ಮ ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯಲು ಧ್ವನಿಗೂಡಿಸುವ ಅಗತ್ಯತೆ ಇದೆ. ಇನ್ನೂ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದು ಶೋಷಿತ ಸಮುದಾಯದ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಹೀಗಾಗಿ, ಯಾವುದೇ ಬೇಡಿಕೆಯಿದ್ದರೂ, ಮುಕ್ತವಾಗಿ ಈಡೇರಿಸಿಕೊಳ್ಳಬೇಕು ಎಂದು ಹೇಳಿದರು.

ಬಾಲಿವುಡ್ ಹಾಸ್ಯ ನಟ ಅಲಿ ಅಸ್ಗರ್ ಮಾತನಾಡಿ,ಇಮಾಮ್ ಹುಸೇನ್ ಅವರ ತ್ಯಾಗವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅವರಿಗೆ, ಸತ್ಯ ಮತ್ತು ನ್ಯಾಯದ ಮೌಲ್ಯಗಳಿಗಿಂತ ಮುಖ್ಯವಾದುದು ಏನೂ ಇರಲಿಲ್ಲ. ಸಮಾನತೆ ಮತ್ತು ನ್ಯಾಯಕ್ಕೆ ಅವರು ಒತ್ತು ನೀಡಿರುವುದು ಗಮನಾರ್ಹ. ಇದು ಅನೇಕರಿಗೆ ಶಕ್ತಿ ತುಂಬಿದೆ ಎಂದು ಅಭಿಪ್ರಾಯಪಟ್ಟರು.

‘ಹುಸೇನ್ ಡೇ’ ಕಾರ್ಯಕ್ರಮಪ್ರಧಾನ ಸಂಚಾಲಕ ಆಗಾ ಸುಲ್ತಾನ್ ಮಾತನಾಡಿ, 1991ರಲ್ಲಿ ಇಮಾಮಿಯಾ ಇಂಗ್ಲಿಷ್ ಪ್ರೌಢ ಶಾಲೆಯ ಸಂಸ್ಥಾಪಕ ಪ್ರಾಂಶುಪಾಲ ಮಿರ್ಝಾ ಮುಹಮ್ಮದ್ ಯಾನೆ ಕಿಫಾಯತ್ ಸರ್ ಅವರು ‘ಹುಸೇನ್ ಡೇ’ ಕಾರ್ಯಕ್ರಮ ಆಯೋಜಿಸುವುದನ್ನು ಪ್ರಾರಂಭಿಸಿದರು. ಅಂದಿನಿಂದಲೂ ನಿರಂತರವಾಗಿ 30 ವರ್ಷಗಳಿಂದ ನಾವು ಈ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಎಂದರು.


ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಚಿಂತಕ ಆಚಾರ್ಯ ಪ್ರಮೋದ್ ಕೃಷ್ಣಂ, ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ಅಮಿನ್ ಪಟೇಲ್, ಐಆರ್‍ಎಸ್ ಹಿರಿಯ ಅಧಿಕಾರಿ ಸಯ್ಯದ್ ನಾಸೀರ್ ಅಲಿ, ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ, ಸೆಂಟ್ ಜೋಸೆಫ್ ಕಾಲೇಜಿನ ಪ್ರಾಂಶುಪಾಲ ಡಾ.ವಿಕ್ಟರ್ ಲೋಬೋ, ಮಾಜಿ ಸಚಿವ ರೋಶನ್ ಬೇಗ್, ಶಾಸಕ ಎನ್.ಎ. ಹಾರಿಸ್, ಮಾಜಿ ಶಾಸಕ ಹಸನ್ ಅಹ್ಮದ್, ಮೌಲಾನ ಸೆಯ್ಯದ್ ಮುಹಮ್ಮದ್ ಇಬ್ರಾಹಿಂ, ಮೌಲಾನ ಮುಹಮ್ಮದ್ ಅಸದ್ ಅಮ್ರಿ, ಡಾ.ಝಕ್ರಿಯಾ ಅಬ್ಬಾಸ್, ಸೈಯದ್ ರಝಿ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News