ಮೋದಿ ಮತ್ತೆ ಪ್ರಧಾನಿ ಆಗುವ ನೈತಿಕ ಹಕ್ಕು ಹೊಂದಿಲ್ಲ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಿದರು. ಈ.ಡಿ, ಐಟಿ, ಸಿಬಿಐ ಹೆಸರಲ್ಲಿ ಹೆದರಿಸಿದರು, ಬೆದರಿಸಿದರು. ಆದರೂ ದೇಶದ ಜನ ಬಿಜೆಪಿಗೆ ಬಹುಮತ ಕೊಡಲಿಲ್ಲ. ಈ ಸೋಲಿನ ಕಾರಣದಿಂದ ಮೋದಿ ಮತ್ತೆ ಪ್ರಧಾನಿ ಆಗುವ ನೈತಿಕ ಹಕ್ಕು ಹೊಂದಿಲ್ಲ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ಗೃಹ ಕಚೇರಿ ಕೃಷ್ಣಾ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಲೋಕಸಭಾ ಚುನಾವಣೆಯಲ್ಲಿ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. 15-20 ಸ್ಥಾನ ನಮ್ಮ ನಿರೀಕ್ಷೆಯಾಗಿತ್ತು. ಆದರೆ, 2019ರಲ್ಲಿ ಕೇವಲ ಒಂದು ಸ್ಥಾನದಲ್ಲಿ ಗೆದ್ದಿದ್ದೆವು. ಈಗ 9ಕ್ಕೆ ಏರಿದ್ದೇವೆ. ಈ ಬಾರಿ ನಾವು ಶೇ.45.34, ಬಿಜೆಪಿ ಶೇ.46.04ರಷ್ಟು ಮತ ಪಡೆದಿದೆ ಎಂದು ತಿಳಿಸಿದರು.
2019ರಲ್ಲಿ ಬಿಜೆಪಿ ಶೇ.51.38ರಷ್ಟು ಮತ ಗಳಿಸಿತ್ತು. ನಮಗೆ ಶೇ31.88ರಷ್ಟು ಮಾತ್ರ ಮತಗಳು ಬಂದಿದ್ದವು. 2019ಕ್ಕೆ ಹೋಲಿಸಿದರೆ ನಮ್ಮ ಮತ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದರು.
ಬಿಜೆಪಿ ಮತ ಪ್ರಮಾಣ ಶೇ.5ರಷ್ಟು ಕುಸಿದಿದೆ. ಜೆಡಿಎಸ್ ಜೊತೆ ಹೊಂದಾಣಿಕೆ ಬಳಿಕವೂ ಅವರ ಮತ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜೆಡಿಎಸ್ ಕೂಡ 2019ಕ್ಕಿಂತ ಕಡಿಮೆ ಪ್ರಮಾಣದ ಮತ ಪಡೆದಿದೆ. ಆದರೂ ನಾವು ನಿರೀಕ್ಷಿತ ಪ್ರಮಾಣದಲ್ಲಿ ಸೀಟು ಗೆದ್ದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಮೋದಿ ಮುಖ ನೋಡಿಯೂ ಬಿಜೆಪಿಗೆ ಬಹುಮತ ಬಂದಿಲ್ಲ:
ರಾಷ್ಟ್ರಮಟ್ಟದಲ್ಲಿಯೂ ಕಾಂಗ್ರೆಸ್ ಮತ ಪ್ರಮಾಣ ಹೆಚ್ಚಾಗಿದೆ. ಕೇಂದ್ರದಲ್ಲಿ ಅಧಿಕಾರಿದಲ್ಲಿದ್ದ ಬಿಜೆಪಿ 2014 ಹಾಗೂ 2019ಕ್ಕಿಂತ ಕಡಿಮೆ ಸೀಟು ಗಳಿಸಿದೆ. ಮೋದಿ ಮುಖ ನೋಡಿಯೂ ಬಿಜೆಪಿಗೆ ಬಹುಮತ ಬಂದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಬಿಜೆಪಿ ಸರಳ ಬಹುಮತ ಪಡೆಯುವಲ್ಲೂ ಸೋತಿದೆ. ದೇಶದಲ್ಲಿ ಎಲ್ಲೂ ಮೋದಿ ಅಲೆ ಕಾಣಲಿಲ್ಲ. ಹೀಗಾಗಿ ಈ ಫಲಿತಾಂಶ ಮೋದಿ ಜನಪ್ರಿಯತೆ ನೆಲಕಚ್ಚಿದೆ ಎನ್ನುವುದು ಮೇಲು ನೋಟಕ್ಕೆ ಗೊತ್ತಾಗಿದೆ. ಸರಕಾರ ಯಾರು ಮಾಡುತ್ತಾರೆ ಅನ್ನೋದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಸುಳ್ಳು ಹೇಳಿಕೊಂಡು ತಿರುಗಿದರೂ ಅವರಿಗೆ ಬಹುಮತ ಬರಲಿಲ್ಲ:
ಮೋದಿ ಚುನಾವಣೆಯ ಕೊನೆ ಕೊನೆಗೆ ಧರ್ಮ, ದೇವರ ಹೆಸರಲ್ಲಿ ಮತ ಕೇಳಿ ನೇರವಾಗಿ ಇತರೆ ಧರ್ಮೀಯರ ವಿರುದ್ಧ ಭಾಷಣ ಮಾಡಿದರು, ಹಿಂದುಳಿದವರ ಮೀಸಲಾತಿ ಕಾಂಗ್ರೆಸ್ ಕಿತ್ತುಕೊಳ್ಳುತ್ತದೆ ಎಂದು ಸುಳ್ಳು ಹೇಳಿಕೊಂಡು ತಿರುಗಿದರೂ ಅವರಿಗೆ ಬಹುಮತ ಬರಲಿಲ್ಲ. ಎನ್‍ಡಿಎ ಕಳೆದ ಬಾರಿಗಿಂತ 64 ಸ್ಥಾನ ಕಳೆದುಕೊಂಡಿದೆ. ಇದು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಸೋಲು ಎಂದು ಅವರು ನುಡಿದರು.
ರಾಮನ ಹೆಸರಲ್ಲಿ, ರಾಮ ಮಂದಿರದ ಹೆಸರಲ್ಲಿ ಮತ ಯಾಚನೆ ಮಾಡಿದರು. ಆದರೆ, ರಾಮ ಮಂದಿರ ನಿರ್ಮಾಣವಾಗಿರುವ ಅಯೋಧ್ಯೆಯಲ್ಲೂ ಬಿಜೆಪಿ ಹೀನಾಯವಾಗಿ ಸೋತಿದೆ. ಇದು ಬಿಜೆಪಿಯ ಸೋಲು ಎಂದು ಸಿದ್ದರಾಮಯ್ಯ ಹೇಳಿದರು.
ರಾಹುಲ್ ಗಾಂಧಿಯನ್ನು ದೇಶ ಒಪ್ಪಿಕೊಂಡಿದೆ: ರಾಹುಲ್ ಗಾಂಧಿ ನಡೆಸಿದಂತಹ ಭಾರತ್ ಜೋಡೋ ಯಾತ್ರೆ, ನ್ಯಾಯ ಯಾತ್ರೆಗಳು ಫಲ ನೀಡಿವೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನು ದೇಶದ ಜನತೆ ಬಹಳ ದೊಡ್ಡ ಮಟ್ಟದಲ್ಲಿ ಒಪ್ಪಿಕೊಂಡಿದ್ದಾರೆ. ಎರಡೂ ಕ್ಷೇತ್ರಗಳಲ್ಲೂ ರಾಹುಲ್ ಗಾಂಧಿ ಭರ್ಜರಿ ಮತಗಳಿಂದ ಗೆದ್ದಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕೈಯಲ್ಲಿ ಸಂವಿಧಾನ ಹಿಡಿದೇ ರಾಹುಲ್ ಗಾಂಧಿ ಇಡೀ ದೇಶದಲ್ಲಿ ಚುನಾವಣಾ ಪ್ರಚಾರ ಮಾಡಿದರು. ದೇಶದ ಜನ ಸಂವಿಧಾನದ ಉಳಿವಿಗೆ, ಪ್ರಜಾಪ್ರಭುತ್ವ ಉಳಿವಿಗಾಗಿ ರಾಹುಲ್ ಗಾಂಧಿ ಕೈ ಹಿಡಿದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಸರಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮ ಏನಾಗಿದೆ ಎನ್ನುವ ಬಗ್ಗೆ ವಿಶ್ಲೇಷಣೆ ನಡೆಯಬೇಕಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಮತ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದ್ದರೂ ಬಿಜೆಪಿ ಮತ ಪ್ರಮಾಣ ಕುಸಿದಿದೆ. ಕಾಂಗ್ರೆಸ್ ಕಡಿಮೆ ಸೀಟು ಗೆದ್ದರೂ ಮತ ಪ್ರಮಾಣ ಹೆಚ್ಚಾಗಿದೆ ಎಂದು ಅಂಕಿ ಅಂಶಗಳ ಸಮೇತ ಸಿದ್ದರಾಮಯ್ಯ ವಿವರಿಸಿದರು.