ವಾಲ್ಮೀಕಿ ಹಗರಣಕ್ಕೂ ನನಗೂ ಸಂಬಂಧವಿಲ್ಲ, ನಾನೇಕೆ ರಾಜೀನಾಮೆ ನೀಡಲಿ : ಸಿಎಂ ಸಿದ್ದರಾಮಯ್ಯ

Update: 2024-07-22 13:33 GMT

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣಕ್ಕೂ ನನಗೂ ಸಂಬಂಧವೇ ಇಲ್ಲ ಎಂದ ಮೇಲೆ ನಾನೇಕೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದವರನ್ನು ಖಾರವಾಗಿ ಪ್ರಶ್ನಿಸಿದ್ದಾರೆ.

ಸೋಮವಾರ ಪರಿಷತ್ ಪ್ರಶ್ನೋತ್ತರ ಕಲಾಪದ ನಂತರ ನಿಯಮ 68ರ ಅಡಿಯಲ್ಲಿ ನಿಲುವಳಿ ಸೂಚನೆ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿದ್ದರಾಮಯ್ಯ, ನಿಗಮದಲ್ಲಿ 187 ಕೋಟಿ ರೂ. ಅಕ್ರಮವಾಗಿದೆ ಎಂದು ಆರೋಪಿಸಿದ್ದಾರೆ. ಇಡೀ ಚರ್ಚೆ ನೋಡಿದಾಗ ಸಿಎಂಗೆ ಕಳಂಕ ತರಬೇಕು, ಮಸಿ ಬಳಿಯಬೇಕು, ಎಸ್ಸಿ-ಎಸ್ಟಿ ಜನರ ವಿರುದ್ಧ ಇದ್ದೇವೆಂದು ತಿಳಿಸಲು ಸುಳ್ಳು ಆರೋಪ ಮಾಡಿದ್ದಾರೆ. ಅವರ ಆರೋಪದಲ್ಲಿ ಸತ್ಯಾಂಶವಿಲ್ಲ. ಅಕ್ರಮ ನಡೆದೇ ಇಲ್ಲ ಎಂದು ನಾನು ಹೇಳಲ್ಲ. ಆದರೆ, ಅಕ್ರಮಕ್ಕೆ ಸರಕಾರ, ಹಣಕಾಸು ಇಲಾಖೆ, ಸಿದ್ದರಾಮಯ್ಯಗೆ ಸಂಬಂಧವಿಲ್ಲ. ಯಾಕೆ ರಾಜೀನಾಮೆ ಕೊಡಬೇಕು? ಎಂದು ಪ್ರಶ್ನಿಸಿದರು.

ಅಕ್ರಮ ಸಂಬಂಧ ತನಿಖೆ ಪ್ರಾರಂಭವಾಗಿದೆ, ಸತ್ಯ ಹೊರಬರಲಿದೆ. ಈಗಲೇ ಇಂತಹವರು ತಪ್ಪು ಮಾಡಿದ್ದಾರೆ ಎನ್ನಲ್ಲ. ತನಿಖೆ ಮಾಡಿ ಆರೋಪಪಟ್ಟಿ ಸಲ್ಲಿಕೆಯಾದ ನಂತರ ಕೋರ್ಟ್‍ನಲ್ಲಿ ಆರೋಪ ಸಾಬೀತಾದಲ್ಲಿ ಶಿಕ್ಷೆ ಅನುಭವಿಸಲಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು, ಭ್ರಷ್ಟಾಚಾರದಲ್ಲಿ ಯಾರೇ ಭಾಗಿಯಾಗಿದ್ದರೂ ಕೋರ್ಟ್ ಮೂಲಕ ಶಿಕ್ಷೆ ಕೊಡಿಸುವ ಕೆಲಸ ಮಾಡಲಾಗುತ್ತದೆ. ಆದರೆ, ಗೊಬೆಲ್ಸ್ ಥಿಯರಿ ಬಳಸಿ ಸುಳ್ಳನ್ನೆ ಸತ್ಯ ಮಾಡುವ ತಂತ್ರವನ್ನು ಬಿಜೆಪಿಯವರು ಮಾಡುತ್ತಿದ್ದಾರೆಂದು ಅವರು ಟೀಕಿಸಿದರು.

ಸುಳ್ಳನ್ನು ಸತ್ಯ ಮಾಡುವುದು ಕಷ್ಟ. ಹಿಟ್ಲರ್ ತಾನೆ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲವೇ? ಇಲ್ಲಿ ಸಿಎಂಗೆ ಮಸಿ ಬಳಿಯಬೇಕು, ಎಸ್ಸಿ-ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ, ಮಹಿಳೆ, ರೈತ, ಕಾರ್ಮಿಕರಿಗೆ ವಿರುದ್ಧವಾಗಿದೆ ಎಂದು ಬಿಂಬಿಸುತ್ತಿದ್ದಾರೆ. ಆದರೆ, ಇದು ಬಿಜೆಪಿಗೆ ಅನ್ವಯ, ಇವರು ಸಾಮಾಜಿಕ ನ್ಯಾಯದ ಪರವಿಲ್ಲ. ಸಂವಿಧಾನವನ್ನೇ ವಿರೋಧ ಮಾಡಿದವರು ಬಿಜೆಪಿಯವರು. ಸಮಾನ ಅವಕಾಶ ಕಲ್ಪಿಸಿಕೊಡುವುದರ ಮೇಲೆಯೇ ಬಿಜೆಪಿಯವರಿಗೆ ನಂಬಿಕೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News