ದೇವರಾಜ ಅರಸುಗೆ ಮರಣೋತ್ತರ ಭಾರತ ರತ್ನಕ್ಕೆ ಶಿಫಾರಸ್ಸು : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಮರಣೋತ್ತರ ಭಾರತ ರತ್ನ ನೀಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 109ನೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಏಕೀಕರಣ 1956 ನವಂಬರ್ 1ರಂದೇ ಆಗಿದ್ದರೂ, 1973ರಲ್ಲಿ ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದರು. ಈ ಹಿನ್ನೆಲೆಯಲ್ಲಿಯೇ ನಾವು ಕರ್ನಾಟಕ ಸಂಭ್ರಮ ವರ್ಷಾಚರಣೆ ನಡೆಸುತ್ತಿದ್ದು, ನವೆಂಬರ್ ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಕನ್ನಡ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧ ಮುಂಭಾಗದಲ್ಲಿ ನವೆಂಬರ್ 1 ರಂದು ಅನಾವರಣಗೊಳಿಸಲಾಗುವುದು ಎಂದು ಪ್ರಕಟಿಸಿದರು.
ದೇವರಾಜ ಅರಸು ಅವರು ಅರಸು ಮನೆತನದಲ್ಲಿ ಹುಟ್ಟಿದ್ದರೂ, ಸಮಾಜದ ತಳ ಸಮುದಾಯವಾದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರ ಬಗ್ಗೆ ಬಹಳ ಕಾಳಜಿ ಹೊಂದಿದ್ದರು. ಅಲ್ಲದೆ, ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ ಇನ್ನೂ ನಮ್ಮಲ್ಲಿ ಸಾಮಾಜಿಕ ಸಮಾನತೆ ಸಾಧ್ಯವಾಗಿಲ್ಲ. ಸಮಾನವಾಗಿ ಸಂಪತ್ತು ಹಂಚಿಕೆ ನಮಗೆ ಸಾಧ್ಯವಾಗಿಲ್ಲ. ವ್ಯಕ್ತಿಯನ್ನು ಜಾತಿ ಆಧಾರದಲ್ಲಿ ಗುರುತಿಸುವಂತಹ ವ್ಯವಸ್ಥೆ ಇನ್ನೂ ನಮ್ಮಲ್ಲಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಜನರನ್ನು ಅವರ ಪ್ರತಿಭೆ ಮೇಲೆ, ವ್ಯಕ್ತಿತ್ವದ ಮೇಲೆ ಗುರುತಿಸದೆ ಜಾತಿ ಆಧಾರದಲ್ಲಿ ಗುರುತಿಸಲಾಗುತ್ತಿದೆ. ಆದರೆ ಯಾರೂ ಕೂಡಾ ಜಾತಿ ಆಧಾರದಲ್ಲಿ ಸಮಾಜದಲ್ಲಿ ಪ್ರತಿಭಾವಂತ ಆಗಲು ಸಾಧ್ಯವಿಲ್ಲ. ಸರಿಯಾದ ಅವಕಾಶಗಳು ಸಿಕ್ಕಿದರೆ ಮಾತ್ರ ಪ್ರತಿಭಾವಂತ ಆಗಲು ಸಾಧ್ಯ. ಬಸವಾದಿ ಶರಣಗರು 800 ವರ್ಷಗಳ ಹಿಂದಯೇ ಸಮಾನತೆಗಾಗಿ ಸಾಮಾಜಿಕ ಕ್ರಾಂತಿಯನ್ನು ಮಾಡಿದರು. ಆದರೆ ಸಂಪೂರ್ಣ ಸಮ ಸಮಾಜ ನಿರ್ಮಾಣ ಇನ್ನೂ ಸಾಧ್ಯವಾಗಿಲ್ಲ ಎಂದು ಅವರು ನುಡಿದರು.
ಎಲ್ಲರಿಗೂ ಸಮಾನ ಅವಕಾಶ ಸಿಗಲು ಹಾವನೂರು ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗದ ಆಯೋಗ ರಚನೆ ಮಾಡಿ, ಎಷ್ಟೇ ವಿರೋಧ ಇದ್ದರೂ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿದರು. ಇದರಿಂದ ಹಿಂದುಳಿದ ವರ್ಗದವರಿಗೆ ಶಿಕ್ಷಣದಲ್ಲಿ ಮೀಸಲಾತಿ ಸಾಧ್ಯವಾಯಿತು. ತಳ ಸಮುದಾಯದವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಬಲಗೊಳಿಸಲು ಎಷ್ಟೇ ವಿರೋಧ ಇದ್ದರೂ, ಜಾರಿಗೊಳಿಸಿದರು. ಹಿಂದುಳಿದವರಿಗೆ ಶೇ.38 ರಷ್ಟು ಮೀಸಲಾತಿ ಸಿಕ್ಕಿದ್ದರೆ ಅದಕ್ಕೆ ಅರಸು ಅವರೇ ಕಾರಣ ಎಂದು ಬಣ್ಣಿಸಿದರು.
ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ನಾವು ಜಾತಿ ಗಣತಿ ಮಾಡಿದ್ದೇವೆ. ಜಾತಿ ಗಣತಿ ಮಾಡದೆ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ತಿಳಿಯಲು ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯ ಒದಗಿಸಲು ನಾವು ನಡೆಸುತ್ತಿರುವ ಪ್ರಯತ್ನಗಳಿಂದ ಹತಾಶರಾಗಿ ನನ್ನನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದರು.
ನಾನು 1984ರಲ್ಲಿ ಮೊದಲ ಬಾರಿಗೆ ಮಂತ್ರಿಯಾದ ಬಳಿಕ ಕಳೆದ 40 ವರ್ಷಗಳಲ್ಲಿ ಇಂದಿನವರೆಗೆ ನನ್ನ ಜೀವನದಲ್ಲಿ ಯಾವುದೇ ಕಳಂಕವಿಲ್ಲ. ನಾನು ಯಾವುದೇ ತಪ್ಪು ಮಾಡದಿದ್ದರೂ ಈಗ ಕಪ್ಪು ಮಸಿ ಬಳಿಯಲು ನಿರಂತರ ಪ್ರಯತ್ನ ನಡೆಯುತ್ತಿದೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ, ಸಾಮಾಜಿಕ ನ್ಯಾಯದ ವಿಷಯದಲ್ಲಿ, ನಂಬಿರುವ ಸಿದ್ಧಾಂತಗಳ ಕುರಿತು ಯಾವತ್ತೂ ರಾಜಿ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಅರಸು ಅವರು ಉಳುವವನೇ ಭೂಮಿಯೊಡೆಯ ಎಂದು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿ ಅಸಂಖ್ಯಾತ ಜನರಿಗೆ ಭೂಮಿಯ ಮಾಲಕತ್ವ ನೀಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಭೂಮಿಯ ಹಕ್ಕನ್ನು ಖಾತ್ರಿಪಡಿಸಲು 79 ಎ ಮತ್ತು ಬಿ ಗೆ ಮಾಡಿರುವ ತಿದ್ದುಪಡಿಯನ್ನು ಮತ್ತೆ ಸರಿಪಡಿಸಲಾಗುವುದು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಖರ್ಚು ಮಾಡಲು ಎಸ್ಸಿಪಿ,ಟಿಎಸ್ಪಿ ಕಾಯ್ದೆಗೆ ತಿದ್ದುಪಡಿ ತಂದದ್ದು ನಮ್ಮ ಸರಕಾರ. ಕೇಂದ್ರದಲ್ಲಿ ಈ ರೀತಿಯ ಕಾಯ್ದೆಯನ್ನು ಜಾರಿಗೆ ತರದೇ ಇಲ್ಲಿ ಅನುಷ್ಠಾನದ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಈ ರೀತಿ ಟೀಕಿಸಲು ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಮಾಜಿ ಸಚಿವ ಎಸ್.ಕೆ.ಕಾಂತಾ ಅವರಿಗೆ ‘ದೇವರಾಜ ಅರಸು ಪ್ರಶಸ್ತಿ’ ಪ್ರದಾನ ಮಾಡಿದರು. ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಿವರಾಜ ತಂಗಡಗಿ, ಡಾ.ಎಚ್.ಸಿ.ಮಹದೇವಪ್ಪ, ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ನಾರಾಯಣ ಸ್ವಾಮಿ, ರಿಝ್ವ್ವಾನ್ ಆರ್ಶದ್, ಶ್ರೀನಿವಾಸ್, ಮಾಜಿ ಶಾಸಕ ಡಿ.ಆರ್.ಪಾಟೀಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ, ಅರಸು ನಿಗಮದ ಅಧ್ಯಕ್ಷ ಕೀರ್ತಿ ಗಣೇಶ್ ಸೇರಿದಂತೆ ಪ್ರಮುಖರಿದ್ದರು.
ಹಿಂದುಳಿದ ವರ್ಗವನ್ನು ತುಳಿಯುತ್ತಾರೆ: ‘ಹಿಂದುಳಿದವರನ್ನು ತುಳಿಯಲು ಈಗಲೂ ನಿರಂತರ ಹುನ್ನಾರಗಳು ನಡೆಯುತ್ತಿವೆ. ನಾನು ಮುಖ್ಯಮಂತ್ರಿ ಆದ ಮೇಲೆ ಬಡವರಿಗಾಗಿ, ಮಹಿಳೆಯರಿಗಾಗಿ, ರೈತರಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಐದು ಗ್ಯಾರಂಟಿ ಯೋಜನೆಗಳು ಬಡವರು, ಮಹಿಳೆಯರು, ರೈತರು, ಯುವಕರ ಪರವಾಗಿದೆ. ಆದರೆ ಬದಲಾವಣೆ ಬಯಸದ, ಬಡವರ ವಿರೋಧಿ ಪಟ್ಟಭದ್ರರು ಇದನ್ನು ವಿರೋಧಿಸುತ್ತಿದಾರೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳೀದ್ದಾರೆ.