ಸತ್ಯದ ದನಿಯಾಗಿ ನಿಂತಿದ್ದಕ್ಕೆ ಮೋದಿ ಆಡಳಿತದಲ್ಲಿ ಕೊಲೆಯಾದ ಪತ್ರಕರ್ತರು ಎಂದು ಪಟ್ಟಿ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

Update: 2023-09-15 18:38 GMT

ಬೆಂಗಳೂರು: 'ʼಇಂಡಿಯಾ ಮೈತ್ರಿ ಕೂಟ ಮಾಧ್ಯಮಗಳು ಮತ್ತು ಪತ್ರಕರ್ತರನ್ನು ಗುರಿಯಾಗಿಸಿವೆʼʼ ಎಂಬ ಬಿಜೆಪಿ ರಾಷ್ರ್ಟೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

ಶುಕ್ರವಾರ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿರುವ ಸಿದ್ದರಾಮಯ್ಯ, ''ಸತ್ಯದ ದನಿಯಾಗಿ ನಿಂತಿದ್ದಕ್ಕೆ ಮೋದಿ ಅವರ ಆಡಳಿತದಲ್ಲಿ ಹಲವು ಪತ್ರಕರ್ತರ ಕೊಲೆಯಾಗಿದೆ ಮತ್ತು ಸತ್ಯದ ವರದಿ ಮಾಡಿದ್ದಕ್ಕಾಗಿ ಹಲವು ಪತ್ರಕರ್ತರು ಬಂಧನಕ್ಕೊಳಗಾಗಿದ್ದಾರೆ'' ಎಂದು ಆರೋಪಿಸಿದ್ದಾರೆ. 

''ಮಾನ್ಯ ಜೆ.ಪಿ ನಡ್ಡಾ ಅವರೇ, ಮಾಧ್ಯಮಗಳ ಮೇಲಿನ ನೈಜ ದಾಳಿಗಳ ಪಟ್ಟಿ ನಾವು ಕೊಡುತ್ತೇವೆ. ಇದನ್ನೆಲ್ಲ ನೀವು ಮರೆತಿರಬಹುದು, ಆದರೆ “ಇಂಡಿಯಾ” ಮರೆತಿಲ್ಲ'' ಎಂದು ಅವರು ಹೇಳಿದ್ದಾರೆ. 

ಸತ್ಯದ ವರದಿ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾದವರೆನ್ನಲಾದ ಪತ್ರಕರ್ತರ ಪಟ್ಟಿಯನ್ನು ಪ್ರಕಟಿಸಿರುವ ಸಿದ್ದರಾಮಯ್ಯ  ''ಸಿದ್ದಿಕ್‌ ಕಪ್ಪನ್‌ ,ಮೊಹಮ್ಮದ್‌ ಝುಬೇರ್,  ಅಜಿತ್‌ ಓಝಾ, ಜಸ್ಪಾಲ್‌ ಸಿಂಘ್‌, ಸಜದ್‌ ಗುಲ್‌'' ಹೆಸರನ್ನು ಉಲ್ಲೇಖಿಸಿದ್ದಾರೆ. 

ಇನ್ನು ಸತ್ಯದ ದನಿಯಾಗಿ ನಿಂತಿದ್ದಕ್ಕೆ ಮೋದಿ ಆಡಳಿತದಲ್ಲಿ ಕೊಲೆಯಾದವರೆನ್ನಲಾದ ಪತ್ರಕರ್ತರು ಪಟ್ಟಿಯನ್ನು ಪ್ರಕಟಿಸಿರುವ ಅವರು, ''ರಾಕೇಶ್‌ ಸಿಂಗ್‌ ಉತ್ತರ ಪ್ರದೇಶ, ಸರ್ಕಾರಿ ನಿಧಿ ಅವ್ಯವಹಾರ ಕುರಿತು ವರದಿ ಮಾಡಿದ್ದಕ್ಕೆ ಕೊಲೆಯಾಗಿದೆ. ಶುಭಂ ಮಣಿ ತ್ರಿಪಾಠಿ, ಉತ್ತರ ಪ್ರದೇಶ, ಮರಳು ದಂಧೆ ಕುರಿತು ವರದಿ ಮಾಡಿದ್ದಕ್ಕೆ ಕೊಲೆಯಾಗಿದೆ. ತಮಿಳುನಾಡಿನ ಜಿ ಮೋಸೆಸ್‌, ಗೋಮಾಳ ಅಕ್ರಮ ಮಾರಾಟ ಕುರಿತು ವರದಿ ಮಾಡಿದ್ದಕ್ಕೆ ಹತ್ಯೆಗೈಯಲಾಗಿದೆ. ಅಸ್ಸಾಮ್‌ ನ ಪರಾಗ್‌ ಭುಯಾನ್ ಅವರನ್ನು ಎಸ್‌ಐ ನೇಮಕಾತಿ ಹಗರಣ ಕುರಿತು ವರದಿ ಮಾಡಿದ್ದಕ್ಕೆ ಕೊಲೆ ಮಾಡಲಾಗಿದೆ. ಗೌರಿ ಲಂಕೇಶ್‌ ಅವರನ್ನು ಕೋಮುವಾದ ವಿರೋಧಿಸಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. 

''ಪಕ್ಷವೊಂದು ಸುದ್ದಿ ಮಾಧ್ಯಮಕ್ಕೆ ಬರುವುದಿಲ್ಲ, ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದು ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ ಅಲ್ಲ.ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸಿದ್ದು ನಿಜವಾದ ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ'' ಎಂದು ಅವರು ಕಿಡಿಕಾರಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News