‘ಅಕ್ರಮ ಭೂಮಿ ಸ್ವಾಧೀನ’: ಲ್ಯಾಂಡ್ ಆಡಿಟಿಂಗ್ ಮಾಡಲು ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ

Update: 2023-09-19 17:26 GMT

ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರು ಮತ್ತು ಸುತ್ತಮುತ್ತ ಭೂಮಿಯ ಬೆಲೆ ಬಹಳಷ್ಟು ಏರಿಕೆಯಾಗಿದ್ದು, ವಾಣಿಜ್ಯ ಉದ್ದೇಶಗಳಿಗಾಗಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ಅಕ್ರಮ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಲಾಗುತ್ತಿದೆ. ನಗರದ ಸುತ್ತಮುತ್ತ ಒಂದು ನೂರು ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಿತವಾಗಿರುವ ರೆಸಾರ್ಟ್ ಮತ್ತು ಅತಿಥಿ ತಂಗುದಾಣಗಳು ಸಹ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಬಗ್ಗೆ ದೂರುಗಳು ದಾಖಲಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಸಂಬಂಧ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ನಗರದ ಸುತ್ತಮುತ್ತ ಸುಮಾರು 75 ಸಾವಿರ ಎಕರೆ ಭೂಮಿ ಒತ್ತುವರಿ ಹಾಗೂ ತಂಗುದಾಣಗಳು 5-6 ಸಾವಿರ ಎಕರೆ ಭೂಮಿ ಕಾನೂನು ಬಾಹಿರವಾಗಿ ಸ್ವಾಧೀನ ಪಡೆದಿರುವ ಮಾಹಿತಿ ಅಂಕಿ ಅಂಶಗಳ ಮೂಲಕ ಬಹಿರಂಗವಾಗಿರುವುದಾಗಿ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಸರಕಾರದ ಸಂಪನ್ಮೂಲ ಕ್ರೋಢೀಕರಣ ದೃಷ್ಟಿಯಿಂದ ತಂಗುದಾಣಗಳ ಅಕ್ರಮ ಭೂಮಿ ಸ್ವಾಧೀನ ಕುರಿತು ಲ್ಯಾಂಡ್ ಆಡಿಟಿಂಗ್ ಮಾಡಲು ಕ್ರಮ ಕೈಗೊಳ್ಳಬೇಕಾಗಿ ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಮನವಿ ಮಾಡಿದ್ದು, ಈ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಬೆಂಗಳೂರು ಸುತ್ತ ಮುತ್ತ ಒತ್ತುವರಿ ಆಗಿರುವ ಸರಕಾರಿ ಭೂಮಿಯನ್ನು ರೆಸಾರ್ಟ್ ಮತ್ತು ತಂಗುದಾಣಗಳಿಂದ ತೆರುವುಗೊಳಿಸಿ ಹರಾಜು ಮೂಲಕ ವಿಲೇಗೊಳಿಸಲು ನಾನು ಮಾಡಿದ್ದ ಮನವಿ ಮೇಲೆ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಕಾರ್ಯದರ್ಶಿಗೆ ರಾಜ್ಯದ ಹಿತ ದೃಷ್ಟಿಯಿಂದ ನಿರ್ದೇಶನ ನೀಡಿದ್ದು ಸ್ವಾಗತಿಸುತ್ತೇನೆ.

ರಮೇಶ್ ಬಾಬು, ವಿಧಾನಪರಿಷತ್ ಮಾಜಿ ಸದಸ್ಯ

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News