ಜ.12ಕ್ಕೆ ಶಿವಮೊಗ್ಗದಲ್ಲಿ ಯುವ ನಿಧಿ ಯೋಜನೆಗೆ ಸಿಎಂ ಸಿದ್ದರಾಮಯ್ಯರಿಂದ ಅಧಿಕೃತ ಚಾಲನೆ: ಸಚಿವ ಮಧುಬಂಗಾರಪ್ಪ

Update: 2023-12-24 09:55 GMT

ಶಿವಮೊಗ್ಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಗೆ ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದ ಜಯಂತಿ ದಿನವಾದ ಜ.12 ರಂದು ನಗರದ ಪ್ರೀಡಂ ಪಾರ್ಕ್ ನಲ್ಲಿ ಯುವ ನಿಧಿ ಗ್ಯಾರಂಟಿ ಯೋಜನೆಗೆ ಚಾಲನೆ ದೊರೆಯಲಿದೆ ಎಂದರು.

ಡಿ. 26 ರಿಂದ ನೋಂದಣಿ ಆರಂಭವಾಗಲಿದೆ. ನೋಂದಣಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಿ ಸೌಲಭ್ಯ ಪಡೆಯಬೇಕು. ರಾಜ್ಯ ಮಟ್ಟದ ಕಾರ್ಯಕ್ರಮವಾಗಿರುವುದರಿಂದ ಇದು ದೊಡ್ಡಮಟ್ಟದಲ್ಲಿ ನಡೆಯಲಿದೆ. ಅಂದಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಸಚಿವ ಸಂಪುಟದ ಸಚಿವರು ಭಾಗವಹಿಸಲಿದ್ದಾರೆ‌ ಎಂದರು.

ಈಗಾಗಲೇ ಸರ್ಕಾರದಿಂದ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಸೌಲಭ್ಯ ಯಾರಿಗೆ ತಲುಪಿಲ್ಲ ಅದರ ಬಗ್ಗೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಗಮನಿಸಿ ಪರಿಹರಿಸಲಾಗುತ್ತಿದೆ. ಅಲ್ಲದೇ ಗ್ರಾಮ ಪಂಚಾಯತ್ ಮಟ್ಟಕ್ಕೆ ಅಧಿಕಾರಿಗಳೇ ಹೋಗಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲಿದ್ದಾರೆ ಎಂದರು.

ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ ತಲುಪದ ಊರಿಗೆ ಬಸ್ ಸಂಚಾರ ಆರಂಭಿಸುವ ಬಗ್ಗೆ ಗಮನ ಹರಿಸಲಾಗುತ್ತದೆ. ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವ ಬಗ್ಗೆ ರಾಜ್ಯಮಟ್ಟದಲ್ಲಿ ಸಾರಿಗೆ ಸಚಿವರು ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಶಾಲೆಯನ್ನು ಮಕ್ಕಳ ಮೂಲಕ ಸ್ವಚ್ಛಗೊಳಿಸುವ ಹಾಗಿಲ್ಲ

ಸರ್ಕಾರಿ ಶಾಲೆಯನ್ನು ಮಕ್ಕಳ ಮೂಲಕ ಸ್ವಚ್ಛಗೊಳಿಸುವ ಹಾಗಿಲ್ಲ. ಈ ಬಗ್ಗೆ ಸ್ಪಷ್ಟವಾಗಿ ಸೂಚಿಸಲಾಗಿದೆ.ಈ ರೀತಿಯ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಂಡರೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಡಿ ದರ್ಜೆ ನೌಕರರ ಮೂಲಕ ಈ ಕೆಲಸ ಮಾಡಿಸಬೇಕು. ಅಗತ್ಯ ಬಿದ್ದರೆ ಡಿ ದರ್ಜೆ ಹುದ್ದೆಯನ್ನು ಭರ್ತಿ ಮಾಡಲಾಗುವುದು ಎಂದರು.

ನೆಲದ ಮೇಲೆ‌ ಕುಳಿತು ಪಾಠ ಕೇಳುವಂತಿಲ್ಲ

ಎಲ್ಲಾ ಶಾಲೆಗಳಿಗೂ ಅಗತ್ಯವಾದ ಡೆಸ್ಕ್ ಸೌಲಭ್ಯ ಕಲ್ಪಿಸಲಾಗುವುದು. ನೆಲದ ಮೇಲೆ‌ ಮಕ್ಕಳು ಕುಳಿತು ಪಾಠ ಕೇಳಬಾರದು. ಇನ್ನೆರಡು ವರ್ಷದಲ್ಲಿ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಯ ಮಕ್ಕಳಿಗೆ ಕಡ್ಡಾಯವಾಗಿ ಡೆಸ್ಕ್ ಸೌಲಭ್ಯ ನೀಡಲಾಗುವುದು ಎಂದರು.

ಸಮವಸ್ತ್ರದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ.ಮೊದಲಿನಂತೆ ನಡೆಯುತ್ತದೆ

ಹಿಜಾಬ್  ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಯಾವಾಗ ಸಭೆ ನಿಗಧಿ ಮಾಡುತ್ತಾರೋ ಗೊತ್ತಿಲ್ಲ. ಇನ್ನು ಚರ್ಚೆಯ ಹಂತದಲ್ಲಿದ್ದು, ಕಾನೂನು ತಜ್ಞರ ಜೊತೆ ಚರ್ಚೆ ನಡೆಸಬೇಕು. ವಿಚಾರಣೆ ನ್ಯಾಯಾಲಯದ ಹಂತದಲ್ಲಿ ನಡೆಯುತ್ತಿದೆ. ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ದ ಎಂದರು.

ಸಮವಸ್ತ್ರದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ.ಮೊದಲಿನಂತೆ ನಡೆಯುತ್ತದೆ.ಮಕ್ಕಳು ಗೊಂದಲಕ್ಕೊಳಗಾಗುವುದು ಬೇಡ ಎಂದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕರಾದ ಶಾರದಾ ಪೂರ್ಯನಾಯ್ಕ್, ಎಸ್.ಎನ್ ಚನ್ನಬಸಪ್ಪ, ಕಾಂಗ್ರೆಸ್ ಮುಖಂಡರಾದ  ಆರ್.ಪ್ರಸನ್ನಕುಮಾರ್,ಜಿ.ಡಿ ಮಂಜುನಾಥ್, ಎಸ್ಪಿ ದಿನೇಶ್ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News