ಅರಣ್ಯ ರಸ್ತೆಯಲ್ಲಿ ತೋಟಕ್ಕೆ ಹೋಗಲು ಅನುಮತಿ ವಿಚಾರ: ಸರ್ಕಾರದ ವಿರುದ್ಧ ಹೈಕೋರ್ಟ್ ಮೊರೆಹೋದ ಕೆ.ಜೆ.ಜಾರ್ಜ್ ಪುತ್ರ
ಬೆಂಗಳೂರು: ಇಂಧನ ಸಚಿವ ಕೆ.ಜೆ. ಜಾರ್ಜ್ ಪುತ್ರ ರಾಣಾ ಜಾರ್ಜ್ ಎಚ್.ಡಿ. ಕೋಟೆಯ ಬಳಿಯ ಗ್ರಾಮಗಳ ಕೃಷಿ ತೋಟ, ತಮ್ಮ ಜಮೀನಿಗೆ ಅರಣ್ಯದೊಳಗೆ ಹೋಗದಂತೆ ರಾಜ್ಯ ಸರ್ಕಾರ ಅರಣ್ಯ ಇಲಾಖೆ ನಿರ್ಬಂಧ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ಬಳಿಯ ಶಂಭುಗೌಡನಹಳ್ಳಿ, ಲಕ್ಕಸೋಗೆ ಗ್ರಾಮಗಳಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಪುತ್ರ ರಾಣಾ ಜಾರ್ಜ್ ಜಮೀನು ಹೊಂದಿದ್ದು, ಈ ಜಮೀನಿಗೆ ಹೋಗಬೇಕೆಂದರೆ ಎಚ್.ಡಿ. ಕೋಟೆಯ ನುಗು ವನ್ಯಜೀವಿ ಅಭಯಾರಣ್ಯದಲ್ಲಿನ ರಸ್ತೆ ಮಾರ್ಗದ ಮೂಲಕ ಜಮೀನಿಗೆ ಹೋಗಬೇಕು. ಆದರೆ, ರಾಜ್ಯ ಸರ್ಕಾರದಿಂದ ಅರಣ್ಯದೊಳಗೆ ಜಮೀನಿಗೆ ಹೋಗಲು ಹಾದಿ ಬಳಕೆ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ಹಾಗಾಗಿ ರಾಣಾ ಜಾರ್ಜ್ ಸರ್ಕಾರದ ನಿರ್ಬಂಧವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅರಣ್ಯದಲ್ಲಿ ಜಮೀನನ್ನು ಹೊಂದಿದವರು ತಮ್ಮ ಜಮೀನಿಗೆ ಹೋಗಲು ಅವಕಾಶ ನೀಡಬೇಕು. ರಾತ್ರಿ ಹಾಗೂ ಹಗಲಿನ ಸಮಯದಲ್ಲಿ ಅನಿರ್ಬಂಧಿವಾಗಿ ಸಂಚರಿಸಲು ಅನುಮತಿ ಅಗತ್ಯವಿದೆ. ಅನುಮತಿ ನೀಡುವಂತೆ ಅರಣ್ಯಾಧಿಕಾರಿಗೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದರು. ಈ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಅರಣ್ಯ ಇಲಾಖೆ ಹಾಗೂ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ವೇಳೆ ರಾಣಾ ಜಾರ್ಜ್ ಪರ ಹಿರಿಯ ವಕೀಲ ವಿಕ್ರಂ ಹುಯಿಲಗೋಳ, ಅಭಯಾರಣ್ಯದ ವ್ಯಾಪ್ತಿಯಲ್ಲಿ ಜಮೀನು ಹೊಂದಿರುವವರಿಗೆ ಸಂಚರಿಸಲು ವಿನಾಯಿತಿ ಇದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಕಲಂ 27(1)(ಸಿ) ಅಡಿ ವಿನಾಯಿತಿ ಇದೆ. ಆದರೆ, ಅರಣ್ಯ ಇಲಾಖೆ ಅರ್ಜಿದಾರರ ವಿರುದ್ಧ ಕಾನೂನುಬಾಹಿರ ಆದೇಶ ಹೊರಡಿಸಿದೆ. ಇದು ಸಂವಿಧಾನದ 19 (1)(ಡಿ) ವಿಧಿಗೆ ವ್ಯತಿರಿಕ್ತವಾಗಿದೆ. ಮುಕ್ತಸಂಚಾರಕ್ಕೆ ಅಡ್ಡಿ ಮಾಡಿರುವ ಅರಣ್ಯ ಇಲಾಖೆಯ ಈ ನಿರ್ಬಂಧವನ್ನು ರದ್ದಿಗೆ ಮನವಿ ಮಾಡಿದರು.
ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ರಾಣಾ ಜಾರ್ಜ್ ಪರ ವಕೀಲರು ಹಾಗೂ ರಾಜ್ಯ ಸರ್ಕಾರದ ಪರ ವಕೀಲರ ವಾದ ಪ್ರತಿವಾದಗಳನ್ನು ಆಲಿಸಿದ್ದಾರೆ. ನಂತರ ಅರಣ್ಯ ಇಲಾಖೆಯ ನಿಯಮಾವಳಿಯಲ್ಲಿ ಜಮೀನಿಗೆ ಹೋಗಲು ಅವಕಾಶ ನೀಡಬೇಕು ಎಂಬ ಬಗ್ಗೆ ಉಲ್ಲೇಖವಿದ್ದರೂ, ನಿರ್ಬಂಧ ವಿಧಿಸಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ, ಅರಣ್ಯ ಇಲಾಖೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇನ್ನ ಮುಂದಿನ ವಿಚಾರಣೆಯನ್ನು ನ.29ಕ್ಕೆ ಮುಂದೂಡಲಾಗಿದೆ.