ನಾಳೆ (ಫೆ.16) ರಾಜ್ಯ ಬಜೆಟ್: ಗ್ಯಾರಂಟಿ ಬೆಳಕಿನಲ್ಲಿ ‘ಅಭಿವೃದ್ಧಿ ಕನಸಿನ ಆಯವ್ಯಯ’ ಮಂಡನೆಗೆ ಕ್ಷಣಗಣನೆ

Update: 2024-02-15 13:57 GMT

ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಮುಂದುವರಿಕೆಗೆ ಸಂಪನ್ಮೂಲ ಕ್ರೂಢೀಕರಣ, ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ (ಫೆ.16) ಮಂಡಿಸಲಿರುವ 2024-25ನೆ ಸಾಲಿನ ಬಜೆಟ್‍ನತ್ತ ರಾಜ್ಯದ ಜನತೆಯ ಚಿತ್ತ ನೆಟ್ಟಿದೆ.

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಎರಡನೆ ಅವಧಿಯ ಆಯವ್ಯಯ ಮಂಡಿಸುತ್ತಿದ್ದು, ಚುನಾವಣೆಯನ್ನು ಗೆಲ್ಲುವ ನಿಟ್ಟಿನಲ್ಲಿ ಜನಪರ ಕಾರ್ಯ ಯೋಜನೆಗಳನ್ನು ಪ್ರಕಟಿಸಿದ್ದಾರೆ ಎಂಬ ಕುತೂಹಲ ಸೃಷ್ಟಿಸಿದೆ. ಹಣಕಾಸು ಸಚಿವರಾಗಿ ದಾಖಲೆಯ 15ನೆ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯನವರ, ಬಜೆಟ್‍ನ ಬಗ್ಗೆ ಜನತೆಗೆ ಸಾಕಷ್ಟು ನಿರೀಕ್ಷೆಗಳಿವೆ.

ಕಳೆದ ವರ್ಷ 3.25 ಲಕ್ಷ ಕೋಟಿ ರೂ. ಮೊತ್ತದ ಬೃಹತ್ ಗಾತ್ರದ ಆಯವ್ಯಯ ಮಂಡಿಸಿದ್ದ ಸಿದ್ದರಾಮಯ್ಯ, ಈ ಬಾರಿಯ ಬಜೆಟ್ ಗಾತ್ರ 3.80 ಲಕ್ಷ ಕೋಟಿ ರೂ.ದಾಟುವ ಸಾಧ್ಯತೆಗಳಿವೆ. ನಾಳೆ(ಫೆ.16) ಬೆಳಗ್ಗೆ 10.15ಕ್ಕೆ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀಡಿದ್ದ 5 ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಮಹತ್ವದ ಯೋಜನೆಗಳಿಗೆ ಸಂಪನ್ಮೂಲ ಒದಗಿಸುವುದು ಸವಾಲಿನ ಸಂಗತಿಯಾಗಿದೆ.

ಕೇಂದ್ರದಿಂದ ಅನುದಾನ ತಾರತಮ್ಯ, ತೆರಿಗೆ ಪಾಲಿನ ಕಡಿತ, ರಾಜ್ಯದ ತೆರಿಗೆ ಸಂಗ್ರಹ ನಿಗದಿತ ಗುರಿ ಸಾಧನೆಯ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯವ್ಯಯ ಮಂಡಿಸುತ್ತಿದ್ದು, ಸಂಪನ್ಮೂಲ ಕ್ರೂಢೀಕರಣಕ್ಕೆ ಏನೆಲ್ಲಾ ಕಸರತ್ತು ನಡೆಸಿದ್ದಾರೆಂಬುದು ಬಜೆಟ್‍ನಲ್ಲಿ ಬಹಿರಂಗವಾಗಲಿದೆ. ಈ ಮಧ್ಯೆ ರಾಜ್ಯದಲ್ಲಿನ ತೀವ್ರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನರ ನೆರವಿಗೆ ಧಾವಿಸಲಿದ್ದಾರೆಯೇ ಎಂಬ ನಿರೀಕ್ಷೆ ಇದೆ.

ಸಾಲಮನ್ನಾ ಬೇಡಿಕೆ: ಈ ಬೆಳವಣಿಗೆಗಳ ನಡುವೆಯೇ ಬರ ಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಕೃಷಿ ಸಾಲಮನ್ನಾ ಮಾಬೇಕೆಂಬ ಬೇಡಿಕೆ ರೈತರಿಂದ ಕೇಳಿಬಂದಿದೆ. ಆಯವ್ಯಯದಲ್ಲಿ ಸಿದ್ದರಾಮಯ್ಯನವರು ರೈತರಿಗೆ ಯಾವ ಪರಿಹಾರ ಸೂತ್ರ ಕಲ್ಪಿಸಲಿದ್ದಾರೆಂಬ ಆಸೆಗಣ್ಣಿನ ನಿರೀಕ್ಷೆಯೂ ಇದೆ. ರಾಜ್ಯದ ಜನಸಾಮಾನ್ಯರ ಎಲ್ಲ ಕುತೂಹಲಗಳಿಗೆ ನಾಳಿನ ಬಜೆಟ್ ಉತ್ತರ ಹೇಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News