ಎನ್‍ಡಿಎಯಿಂದ ಆಚೆ ಬಂದು ಕುಮಾರಸ್ವಾಮಿ ನನಗೆ ಬೆಂಬಲ ನೀಡುವ ಬಗ್ಗೆ ಮಾತನಾಡಲಿ: ಡಿ.ಕೆ.ಶಿವಕುಮಾರ್

Update: 2023-11-04 14:40 GMT

ಬೆಂಗಳೂರು, ನ.4: ಕುಮಾರಸ್ವಾಮಿ ಎನ್‍ಡಿಎ ಮೈತ್ರಿಕೂಟದವವರು. ನಮಗೂ ಎನ್‍ಡಿಎಗೂ ಸಂಬಂಧವಿಲ್ಲ. ಮೊದಲು ಎನ್‍ಡಿಎಯಿಂದ ಆಚೆ ಬಂದು ನಂತರ ಬೆಂಬಲದ ಬಗ್ಗೆ ಮಾತನಾಡಲಿ. ಅವರು ಬೆಂಬಲ ನೀಡುವ ಕಾಲದಲ್ಲೆ ಬೆಂಬಲ ನೀಡಲಿಲ್ಲ. ಈಗೇನು ಬೆಂಬಲ ನೀಡುತ್ತಾರೆ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಶಿವಕುಮಾರ್ ನಾಳೆಯೆ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ ನ 19 ಶಾಸಕರ ಬೆಂಬಲ ನೀಡುತ್ತೇವೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಕುಮಾರಕೃಪಾ ಅತಿಥಿ ಗೃಹದ ಬಳಿ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

ಕುಮಾರಸ್ವಾಮಿ ಅವರ ಮಾತು ಕೇಳಿ ಬಹಳ ಸಂತೋಷವಾಗಿದೆ. ಸದ್ಯ ನಮಗೆ ರಾಜ್ಯದ ಜನತೆ 136 ಸೀಟು ಜತೆ ಅಧಿಕಾರ ಕೊಟ್ಟಿದ್ದಾರೆ. ಅವರು ಉತ್ತಮ ವಿರೋಧ ಪಕ್ಷದ ನಾಯಕನಾಗಿ ಸರಕಾರವನ್ನು ತಿದ್ದುವ ಕೆಲಸ ಮಾಡಲಿ ಎಂದು ಶಿವಕುಮಾರ್ ಹೇಳಿದರು.

ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ಒಂದೊಂದು ಬಾರಿ ಅವರನ್ನು ಮುಖ್ಯಮಂತ್ರಿ ಮಾಡಿದೆ. ಅವರ ತಂದೆಯನ್ನು ಕಾಂಗ್ರೆಸ್ ಪ್ರಧಾನಮಂತ್ರಿ ಮಾಡಿದೆ. ಅವರಿಗಿರುವ ಅಪಾರ ಅನುಭವದ ಮೂಲಕ ನಮಗೆ ಮಾರ್ಗದರ್ಶನ ನೀಡಲಿ. ಈಗ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ನಮಸ್ಕಾರ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಕುಮಾರಸ್ವಾಮಿ ನಿಮ್ಮ ಬಗ್ಗೆ ಪ್ರೀತಿ ತೋರಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರಿಗೆ ನನ್ನ ಮೇಲೆ ಎಷ್ಟು ಪ್ರೀತಿ ಇದೆ, ದಿಲ್ಲಿಯಲ್ಲಿ ಏನು ಮಾತನಾಡಿದ್ದಾರೆ, ಯಾರ ಯಾರ ಬಳಿ ಏನೇನು ಮಾತನಾಡಿದ್ದಾರೆ, ನನ್ನ ವಿಚಾರದಲ್ಲಿ ಏನೇನು ದೊಡ್ಡ ಪ್ಲಾನ್ ಗಳು ನಡೆಯುತ್ತಿವೆ ಎಂಬುದು ನನಗೆ ಗೊತ್ತಿದೆ ಎಂದರು.

ಅವರ ಜೊತೆಯಲ್ಲಿದ್ದವರೆ ನನಗೆ ಮಾಹಿತಿ ನೀಡಿದ್ದಾರೆ. ನಮಗೆ ಜನ ಆಶೀರ್ವಾದ ಮಾಡಿದ್ದು, ಅವರಿಗೆ ಉತ್ತಮ ಕೆಲಸ ಮಾಡೋಣ. ಕುಮಾರಸ್ವಾಮಿ ಅವರಿಗೆ ನಿಜಕ್ಕೂ ನನ್ನ ಮೇಲೆ ಪ್ರೀತಿ ಇದ್ದರೆ ಮೈತ್ರಿ ಸರಕಾರ ಬಿದ್ದ ನಂತರ ನಡೆದ ಘಟನೆಗಳು, ಅವರು ಆಡಿರುವ ಮಾತುಗಳನ್ನು ನೆನಪು ಮಾಡಿಕೊಂಡು ತಮ್ಮ ಆತ್ಮಸಾಕ್ಷಿಗೆ ಉತ್ತರ ನೀಡಲಿ ಎಂದು ಶಿವಕುಮಾರ್ ತಿಳಿಸಿದರು.

ನನಗೆ ಯಾವ ಶಾಸಕರ ಬೆಂಬಲವೂ ಬೇಡ: ನನಗೆ ಸರಕಾರದಲ್ಲಿ ಯಾವ ಶಾಸಕರ ಬೆಂಬಲವೂ ಬೇಡ. ನನ್ನ ಪರವಾಗಿ ಮಾತನಾಡಿರುವ ಶಾಸಕ ಇಕ್ಬಾಲ್ ಹುಸೇನ್ ಗೂ ನೋಟಿಸ್ ಜಾರಿ ಮಾಡುತ್ತೇನೆ. ನನ್ನ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಚುನಾವಣೆ ನಡೆಸಿದ್ದು, ರಾಜ್ಯದ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ಉತ್ತಮ ಆಡಳಿತ ನೀಡುವುದು ನಮ್ಮ ಗುರಿ. ನನಗೆ ಯಾವುದಕ್ಕೂ ಆತುರವಿಲ್ಲ. ನಾನು ಯಾರಿಗೂ ಬೆಂಬಲ ನೀಡಿಲ್ಲ. ನಮ್ಮ ಹೈಕಮಾಂಡ್ ತೀರ್ಮಾನ ಮಾಡಲಿದೆ. ನಮ್ಮ ಪಕ್ಷದ ನಾಯಕರಿಗೆ ಏನು ಹೇಳಬೇಕೋ ಹೇಳಿದ್ದೇವೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಅವರು ಹೇಳಿದ್ದನ್ನು ಮಾಧ್ಯಮಗಳು ತಿರುಚಿವೆ. ಸಿದ್ದರಾಮಯ್ಯ ನಮ್ಮ ನಾಯಕರು. ನಾವು ಅವರ ನಾಯಕತ್ವ ಒಪ್ಪಿದ್ದೇವೆ. ಪಕ್ಷ ಹೇಳಿದಂತೆ ನಾವು ಕೇಳುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News