ರಾಷ್ಟ್ರಕ್ಕೆ ಅಪಾಯವಿರುವ ಪ್ರಕರಣಗಳಲ್ಲಿ ಸಹಾನುಭೂತಿ ಸಲ್ಲ: ಹೈಕೋರ್ಟ್

Update: 2024-01-21 16:26 GMT

ಬೆಂಗಳೂರು: ಭಾರತದ ಪ್ರಜೆಯನ್ನು ಪ್ರೀತಿಸಿ ವಿವಾಹವಾಗಿ ನಂತರ ಆತನಿಂದ ದೂರವಾಗಿದ್ದ ಬಾಂಗ್ಲಾದೇಶದ ಮಹಿಳೆಯ ವೀಸಾ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಆಕೆಯನ್ನು ತಾಯ್ನಾಡಿಗೆ ವಾಪಸು ಕಳುಹಿಸುವಂತೆ ‘ಎಫ್‍ಆರ್ ಆರ್ ಒ’ಗೆ ಹೈಕೋರ್ಟ್ ನಿರ್ದೇಶಿಸಿದೆ. ಅಲ್ಲದೆ, ರಾಷ್ಟ್ರಕ್ಕೆ ಅಪಾಯವಿರುವ ಪ್ರಕರಣಗಳಲ್ಲಿ ಸಹಾನುಭೂತಿ ತೋರಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ವೀಸಾ ಅವಧಿ ವಿಸ್ತರಣೆ ಮಾಡಲು ನಿರಾಕರಿಸಿ ಎಕ್ಸಿಟ್ ಪರ್ಮಿಟ್ ನೀಡಿದ್ದ ಎಫ್‍‌.ಆರ್.ಆರ್.ಒ ಕ್ರಮ ಪ್ರಶ್ನಿಸಿ ಬಾಂಗ್ಲಾದೇಶದ ಮಹಿಳೆ ರಕ್ತಿಮ ಖಾನುಮ್ (46) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠವು ವಜಾಗೊಳಿಸಿ ಆದೇಶಿಸಿದೆ.

ಅವಧಿ ಮೀರಿ ಭಾರತದಲ್ಲಿ ನೆಲೆಸಿರುವ ವಿದೇಶಿಯರನ್ನು ದೇಶದಿಂದ ಹೊರಹಾಕಲು ಕೇಂದ್ರ ಸರಕಾರ ಅಧಿಕಾರ ಹೊಂದಿದೆ. ಇಂತಹ ಪ್ರಕರಣದಲ್ಲಿ ವಿದೇಶಿಯರಿಗೆ ಯಾವುದೇ ಸಹಾನೂಭೂತಿ ತೋರಿದರೆ ಅದು ಸರಕಾರ, ಎಫ್‍‌.ಆರ್.ಆರ್.ಒ ಗೆ(ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಅಧಿಕಾರಿ) ಮತ್ತು ವಲಸಿಗರ ಬ್ಯೂರೊದ ವಿವೇಚನಾಧಿಕಾರಕ್ಕೆ ಸಂಕೋಲೆ ಹಾಕಿದಂತಾಗುತ್ತದೆ ಎಂದು ನ್ಯಾಯಪೀಠವು ತಿಳಿಸಿದೆ.

ರಾಷ್ಟ್ರಕ್ಕೆ ಅಪಾಯವಿರುವ ಪ್ರಕರಣಗಳಲ್ಲಿ ಸಹಾನುಭೂತಿ ತೋರಿಸಲಾಗದು. ಹೀಗಾಗಿ, ಎಕ್ಸಿಟ್ ಪರ್ಮಿಟ್ ನೀಡಿರುವ ಕ್ರಮದಲ್ಲಿ ಯಾವುದೇ ತಪ್ಪು ಇಲ್ಲ. ಹೀಗಾಗಿ, ಅರ್ಜಿದಾರೆಯನ್ನು ದೇಶದಿಂದ ಹೊರಗೆ ಕಳುಹಿಸಲುಎಫ್‍‌.ಆರ್.ಆರ್.ಒ ಕೂಡಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ವೀಸಾ ಅವಧಿ ಪೂರ್ಣಗೊಂಡಿದ್ದು, ಅದನ್ನು ಸಕ್ಷಮ ಪ್ರಾಧಿಕಾರ ವಿಸ್ತರಿಸಿಲ್ಲ. ದಾಖಲೆಗಳು ಇಲ್ಲದೆ ಭಾರತದಲ್ಲಿ ಉಳಿಯಲು ವಿದೇಶಿಯರು ಯಾವುದೇ ಹಕ್ಕನ್ನು ಪ್ರತಿಪಾದಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ರಕ್ತಿಮ ಖಾನುಮ್ (46) ಬಾಂಗ್ಲಾ ದೇಶದಲ್ಲಿ ಹುಟ್ಟಿ ಬೆಳೆದವರು. ಭಾರತದ ಜರ್ನಾದನ ರೆಡ್ಡಿ ಎಂಬಾತ ಆಕೆಯ ಸಂಪರ್ಕಕ್ಕೆ ಬಂದಿದ್ದು, 2017ರ ಡಿಸೆಂಬರ್ 25ರಂದು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಸಂಬಂಧ ಹಳಸಿದ್ದರಿಂದ ಅವರಿಬ್ಬರು ದೂರವಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News