ಗೌತಮ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪ: ನಳಿನ್ ಕುಮಾರ್ ಕಟೀಲ್ ವಿರುದ್ಧ ದೂರು
ಬೆಂಗಳೂರು: ನಗರದ ಅತ್ತಿಗುಪ್ಪೆ ವಾರ್ಡ್ ನ ಮಾಜಿ ಸದಸ್ಯ ದೊಡ್ಡಯ್ಯ ಅವರ ಪುತ್ರ ಗೌತಮ್ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿ ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಣತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ದೂರು ಸಲ್ಲಿಕೆಯಾಗಿದೆ.
ಬಿಬಿಎಂಪಿ ಮಾಜಿ ಸದಸ್ಯ ದೊಡ್ಡಯ್ಯ ಅವರ ಪುತ್ರ ಗೌತಮ್ ಆತ್ಮಹತ್ಯೆ ಮಾಡಿಕೊಂಡದ್ದನ್ನು ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ‘ಗುತ್ತಿಗೆದಾರನ ಆತ್ಮಹತ್ಯೆ’ ಎಂದು ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಶುಕ್ರವಾರ ನಗರದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್‌ನ ನಿಯೋಗವೊಂದು ದೂರು ಸಲ್ಲಿಕೆ ಮಾಡಿದೆ.
'ಭಾರತೀಯ ಜನತಾ ಪಕ್ಷ (ಬಿಜೆಪಿ) ಕರ್ನಾಟಕ ಘಟಕದ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರಾಜ್ಯದ ಜನತೆಗೆ ಸುಳ್ಳು, ಅಪಪ್ರಚಾರ, ಆಧಾರ ರಹಿತ ಆರೋಪಗಳ ಮೂಲಕ ವದಂತಿಯನ್ನು ರವಾನಿಸುತ್ತಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ''ಆತ ಗುತ್ತಿಗೆದಾರ, ಇದಕ್ಕೆ ಸರ್ಕಾರವೇ ಕಾರಣ'' ಎಂದು ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಇವರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಬೇಕು' ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಅವರ ನೃತೃತ್ವದ ನಿಯೋಗ ಒತ್ತಾಯಿಸಿದೆ.
''ಈತ ಗುತ್ತಿಗೆದಾರ ಅಲ್ಲ ಎಂದು ಅವರ ಕುಟುಂಬಸ್ಥರೇ ಸ್ಪಷ್ಟಪಡಿಸಿದ್ದಾರೆ, ಆದರೂ ಕೂಡ ನಳಿನ್ ಕುಮಾರ್ ಕಟೀಲ್ ರವರು ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಧ್ಯಮಗಳ ಮೂಲಕ ಸರ್ಕಾರದ ವಿರುದ್ಧ ಆಧಾರರಹಿತ ಆರೋಪವನ್ನು ಮಾಡುವ ಮೂಲಕ ಸುಳ್ಳು ವದಂತಿಗಳನ್ನು ಹಬ್ಬಿಸಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಜನರ ಶಾಂತಿಗೆ ಭಂಗ ತರುವ ಪ್ರಯತ್ನ ಮಾಡಿದ್ದಾರೆ'' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ''ಆಹ್ಮಹತ್ಯೆ ಪ್ರಕರಣವನ್ನೂ ಬಿಜೆಪಿಯವರು ಗುತ್ತಿಗೆಗೆ ಲಿಂಕ್ ಮಾಡಿದ್ದಾರೆ. ಆತಹತ್ಯೆಯಲ್ಲೂ ಬಿಜೆಪಿಯವರು ರಾಜಕೀಯ ಮಾಡ್ತಾರೆ . ನೋವಿನ ಸಂದರ್ಭವನ್ನನಳೀನ್ ಕುಮಾರ್ ಕಟೀಲ್ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ'' ಎಂದು ಕಿಡಿಕಾರಿದ್ದಾರೆ.