ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ ವಿರುದ್ದ ಚುನಾವಣಾ ಆಯೋಗಕ್ಕೆ ಜೆಡಿಎಸ್‌ನಿಂದ ದೂರು

Update: 2024-04-22 15:17 GMT

ಬೆಂಗಳೂರು: ವಾಮಮರ್ಗದಲ್ಲಿ ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್ ಅಕ್ರಮಗಳನ್ನು ಎಸಗುತ್ತಿದೆ ಎಂದು ಜೆಡಿಎಸ್ ಪಕ್ಷ ಚುನಾವಣಾ ಆಯೋಗಕ್ಕೆ ಸೋಮವಾರದಂದು ದೂರು ನೀಡಿದೆ.

ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ಹಿರಿಯ ಮುಖಂಡ ಆರ್.ಪ್ರಕಾಶ್ ಅವರಿದ್ದ ಜೆಡಿಎಸ್ ನಾಯಕರ ನಿಯೋಗ ಕೇಂದ್ರೀಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ವಿರುದ್ಧ ದೂರು ನೀಡಿದೆ.

ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರು ಅವರು ಸಹಿ ಮಾಡಿರುವ ಗ್ಯಾರಂಟಿ ಕಾರ್ಡುಗಳನ್ನು ಮತದಾರರಿಗೆ ಹಂಚಲಾಗುತ್ತಿದೆ. ಈ ಮೂಲಕ ಮುಗ್ಧ ಮತದಾರರಿಗೆ ಆಮಿಷ ಒಡ್ಡಿ ಅವರನ್ನು ವಂಚಿಸಲಾಗುತ್ತಿದೆ ಎಂದು ಜೆಡಿಎಸ್ ಆರೋಪ ಮಾಡಿದೆ.

ಪಾರದರ್ಶಕವಾಗಿ, ನಿರ್ಭೀತಿ, ಭ್ರಷ್ಟಾಚಾರ ರಹಿತವಾಗಿ ನಡೆಯಬೇಕಿದ್ದ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡುಗಳನ್ನು ಹಂಚುವ ಮೂಲಕ ಕಲುಷಿತಗೊಳಿಸಿ ಅಕ್ರಮ ನಡೆಸುತ್ತಿದೆ. ನ್ಯಾಯ ಪತ್ರ ಹೆಸರಿನಲ್ಲಿ ಐದು ಗ್ಯಾರಂಟಿ ಕಾರ್ಡುಗಳ ಮೇಲೆ ಸಹಿ ಮಾಡಿ ಮತದಾರರಿಗೆ ಹಂಚಿಕೆ ಮಾಡುತ್ತಿರುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಹಾಗೂ ಚುನಾವಣಾ ಅಕ್ರಮವೂ ಆಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಆ ಗ್ಯಾರಂಟಿ ಕಾರ್ಡುಗಳ ಹಂಚಿಯನ್ನು ತಡೆಯಬೇಕು. ಕಾಂಗ್ರೆಸ್ ಪಕ್ಷದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಇಂತಹ ಭರವಸೆಗಳ ಮೂಲಕ ಕಾಂಗ್ರೆಸ್ ಕರ್ನಾಟಕ ಮತ್ತು ದೇಶದ ಆರ್ಥಿಕತೆ, ಬೊಕ್ಕಸಕ್ಕೆ ಹೊರಲಾರದ ಹೊರೆಯನ್ನು ಹೊರೆಸುತ್ತಿದೆ. ಆದ್ದರಿಂದ ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವುದಕ್ಕೆ ಆಯೋಗ ಅತ್ಯಂತ ಕಠಿಣ ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News