ಸಾರ್ವಜನಿಕರಿಂದ ದೂರು: ಚಿತ್ರದುರ್ಗ ಜಿಲ್ಲಾ ಸರ್ಜನ್ ಅಮಾನತುಗೊಳಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ
ಚಿತ್ರದುರ್ಗ: ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ದುರಂತ ಸ್ಥಳಕ್ಕೆ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಇಂದು ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮೃತ 5 ಕುಟುಂಬದವರಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ ಸಚಿವರು, ಮೂವರು ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದ ಸಚಿವ ದಿನೇಶ್ ಗುಂಡೂರಾವ್, ಸಂತ್ರಸ್ತರಿಗೆ ಅಗತ್ಯ ಆರೋಗ್ಯ ಸೇವೆ ನೀಡುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಜಿಲ್ಲಾ ಸರ್ಜನ್ ಬಸವರಾಜ್ ಅವರ ವಿರುದ್ಧ ರೋಗಿಗಳು, ಸಂಬಂಧಿಕರಿಂದ ಸಾಕಷ್ಟು ದೂರು ನೀಡಿದ ಹಿನ್ನೆಲೆಯಲ್ಲಿ ಬಸವರಾಜ್ ಅವರಿಗೆ ಸಚಿವ ದಿನೇಶ್ ಗುಂಡೂರಾವ್ ಅವರು ತರಾಟೆಗೆ ತೆಗೆದುಕೊಂಡರು.
ಹೆರಿಗೆ ವಾರ್ಡ್, ಎಕ್ಸರೇ ಸೇರಿ ಇತರೆಡೆ ಲಂಚದ ಆರೋಪ
ವೈದ್ಯಕೀಯ ಸಿಬ್ಬಂದಿಯ ವಿರುದ್ಧ ಲಂಚ ವಸೂಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಬಸವರಾಜ್ ಅವರನ್ನ ಅಮಾನತು ಗೊಳಿಸುವಂತೆ ಸಚಿವರು ಆಯುಕ್ತ ರಂದೀಪ್ ಅವರಿಗೆ ಆದೇಶಿಸಿದರು.
ಭೇಟಿ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ಕವಾಡಿಗರಹಟ್ಟಿಯ ದುರ್ಘಟನೆ ನಮ್ಮೆಲ್ಲರಿಗೂ ನೋವು ತಂದಿದೆ. ಪ್ರಕರಣದ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಸಿಎಂ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಈ ರೀತಿಯ ಘಟನೆ ಪುನರಾವರ್ತನೆ ಆಗಬಾರದು. ಘಟನೆಗೆ ಕಾರಣವೇನೆಂಬುದರ ಬಗ್ಗೆ ಅಧಿಕಾರಿಗಳಿಂದ ಸೂಕ್ತ ವರದಿ ತರಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಬೇರೆ ಕಡೆಗಳಲ್ಲಿ ಈ ರೀತಿ ಘಟನೆಗಳ ಕುರಿತು ಅನುಮಾನ ಇದ್ರೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕವಾಡಿಗರಹಟ್ಟಿಯ ಸಮಗ್ರ ಅಭಿವೃದ್ದಿಗೆ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ತೇವೆ ಎಂದು ಹೇಳಿದರು.
ಯಾಕೆ ಆಯ್ತು ಹೇಗೆ ಆಯ್ತು ಎಂಬುದನ್ನು ವಿಚಾರಣೆ ಮಾಡಲು ಹೇಳಿದ್ದೇವೆ. ಈಗಾಗಲೇ ಆರೋಗ್ಯ ಇಲಾಯಿಂದ ಪರಿಶೀಲನೆಗೆ ತಂಡ ಕಳಿಸಿಲಾಗಿದೆ. ತಂಡದಿಂದ ಸ್ಪಷ್ಟ ವರದಿ ಬಂದ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಚಿವರು ಹೇಳಿದರು.