ಪ್ರಮೋದ್‌ ಮುತಾಲಿಕ್‌ ಗಡಿಪಾರಿಗೆ ಒತ್ತಾಯಿಸಿ ಹುಬ್ಬಳ್ಳಿ- ಧಾರವಾಡ ಪೊಲೀಸ್‌ ಆಯುಕ್ತರಿಗೆ ದೂರು

Update: 2023-09-22 11:59 GMT

ಹುಬ್ಬಳ್ಳಿ: ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಸಂಘಟನೆಯ ಪ್ರಮೋದ್ ಮುತಾಲಿಕ್  ಅವರನ್ನು ಹಾಗೂ ಅವರ ಕಾರ್ಯಕರ್ತರನ್ನು ಗಡಿ ಪಾರು ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಮ್‌ ಸಂಘಟನೆಗಳ ನಾಯಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಅವರಿಗೆ ದೂರು ಸಲ್ಲಿಕೆ ಮಾಡಿದ್ದಾರೆ.

ಇತ್ತೀಚೆಗೆ ಹುಬ್ಬಳ್ಳಿ ಈದ್ಗಾ ಮೈದಾನದ ಗಣೇಶ ವಿಸರ್ಜನೆಗೆ ಮೈದಾನಕ್ಕೆ ಭೇಟಿ ನೀಡಿದ್ದ ಪ್ರಮೋದ್ ಮುತಾಲಿಕ್​​, ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಮಹಾನಗರ ಪಾಲಿಕೆ 8 ವಲಯದ ಸಹಾಯ ಆಯುಕ್ತ ಚಂದ್ರಶೇಖರಗೌಡ ನೀಡಿದ ದೂರಿನ ಅನ್ವಯ ಕಲಂ 153(ಎ), 295(ಎ) ಐಪಿಸಿ ಅಡಿ ಮುತಾಲಿಕೆ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. 

ಪ್ರಮೋದ್‌ ಮುತಾಲಿಕ್‌ ವಿರುದ್ಧ ದೂರು ನೀಡಿದ ಬಳಿಕ ಮುಸ್ಲಿಂ ಸಮುದಾಯದ ನಾಯಕ ಅಸ್ಪಾಕ್ ಕುಮಾಟಕರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ʼಕೂಡಲೇ ಮುತಾಲಿಕ್ ಮತ್ತು ಅವರ ಸಂಗಡಿಗರ‌ಮೇಲೆ ಕ್ರಮ ಆಗಬೇಕುʼ ಎಂದು ಆಗ್ರಹಿಸಿದರು.

ಈ ಬಗ್ಗೆ  ಹುಬ್ಬಳ್ಳಿ- ಧಾರವಾಡ ಪೊಲೀಸ್‌ ಆಯುಕ್ತೆ  ರೇಣುಕಾ ಸುಕುಮಾರ್‌ ಪ್ರತಿಕ್ರಿಯಿಸಿ, ʼʼಪ್ರಚೋದನಕಾರಿ ಹೇಳಿಕೆ ನೀಡಿದ ಅರೋಪದಡಿ ಪ್ರಮೋದ್ ಮುತಾಲಿಕ್ ವಿರುದ್ಧ ನಿನ್ನೆಯೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಅಂಜುಮನ್ ಸಂಸ್ಥೆಯಿಂದಲೂ ಸಹ ದೂರು ಸಲ್ಲಿಕೆಯಾಗಿದೆ. ಮುತಾಲಿಕ್ ಅವರನ್ನ ಗಡಿಪಾರು ಮಾಡುವಂತೆ ಒತ್ತಾಯ ಕೇಳಿ ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದುʼʼ ಎಂದು ತಿಳಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News